ಜಿಲ್ಲೆ

ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಅಮರೇಶ ಭಾಜನ: ದೊಡ್ಡಾಟದಲ್ಲಿ ಸಲ್ಲಿಸಿದ ಸೇವೆಗೆ ಸಂದ ಗೌರವ

ರಾಯಚೂರು: ಕರ್ನಾಟಕ ಬಯಲಾಟ ಅಕಾಡೆಮಿಯ 2023-24ನೇ ಸಾಲಿನ ಬಯಲಾಟ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಗ್ರಾಮದ ಅಮರೇಶ ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಬಯಲಾಟ ಕಲಾ ಪ್ರಕಾರಗಳಿಗೆ ನೀಡಿರುವ ಅಮೂಲ್ಯವಾದ ಹಾಗೂ ಅನನ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ಅಕಾಡೆಮಿ ನೀಡಲಾಗುತ್ತಿದೆ.

ರಾಜ್ಯದ 5 ಜನರಿಗೆ ಗೌರವ ಪ್ರಶಸ್ತಿ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ಅಮರೇಶ ಅವರ ದೊಡ್ಡಾಟ ಕಲೆಯ ಸೇವೆಯನ್ನು ಪರಿಗಣಿಸಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಮರೇಶ ತಿಮ್ಮಯ್ಯ ಮೂಲತಃ ಸಿಂಧನೂರಿನ ವಲ್ಕಂದಿನ್ನಿ ಗ್ರಾಮದವರು 1964ರಲ್ಲಿ ಜನಿಸಿ, 35 ವರ್ಷಗಳಿಂದ ಬಯಲಾಟ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಕ್ಷರತಾ ಅಭಿಯಾನದ ಮೂಲಕ ಶಿಕ್ಷಣ ಕಲಿತು ಒಕ್ಕಲುತನದ ಜತೆಗೆ ಬಯಲಾಟವನ್ನು ಮೈಗೂಡಿಸಿಕೊಂಡಿದ್ದಾರೆ. ಅನೇಕ ಗ್ರಾಮಗಳಲ್ಲಿ ತಮ್ಮ ಬಯಲಾಟ ಕಲೆಯನ್ನು ಪ್ರದರ್ಶಿಸಿದ್ದು, ಶ್ರೀದೇವಿ ಮಹಾತ್ಮೆಯಲ್ಲಿ ಶ್ರೀದೇವಿ ಪಾತ್ರಕ್ಕೆ ಅಮರೇಶ ಖ್ಯಾತಿ ಪಡೆದಿದ್ದಾರೆ. ಜತೆಗೆ ಶಿವ, ಶ್ರೀಕೃಷ್ಣ, ಆಂಜನೇಯ್ಯ ಪಾತ್ರವನ್ನೂ ಅಭಿನಯಿಸುತ್ತಾರೆ.

ಬಯಲಾಟ ಪ್ರದರ್ಶನ ಕೊಡುವ ಮುಂಚೆ 21 ದಿನಗಳ ಕಾಲ ಅನುಷ್ಠಾನದಲ್ಲಿರಬೇಕಾಗುತ್ತದೆ. ಆ ಸಮಯದಲ್ಲಿ ಕುಟುಂಬವನ್ನು ತೊರೆಯಬೇಕಾಗುತ್ತದೆ. ಅತ್ಯಂತ ನಿಷ್ಠಿಯಿಂದ ಬಯಲಾಟವನ್ನು ಪ್ರದರ್ಶಿಸಬೇಕು. ಪ್ರಸ್ತುತ ದಿನಗಳಲ್ಲಿ ಬಯಲಾಟ ಕಲೆಗೆ ಪ್ರೋತ್ಸಹ ಮತ್ತು ನೋಡುವ ಪ್ರೇಕ್ಷಕರು ಕಡಿಮೆಯಾಗಿರುವುದು ನೋವಿನ ಸಂಗತಿಯಾಗಿದೆ. ಎಂಬುದು ಅಮರೇಶ ಅವರ ಬೇಸರದ ಮಾತುಗಳಾಗಿವೆ.

ಗುರುಗಳಾದ ರಂಗಪ್ಪ ಮಾಸ್ಟರ್ ತಡಕಲ್‌ರಿಂದ ಸಂಗೀತ, ಬಯಲಾಟ ಹಾಗೂ ರಂಗಭೂಮಿ ಕಲೆಯನ್ನು ಕಲಿತಿದ್ದಾರೆ. ಬಯಲಾಟದಲ್ಲಿ ದೊಡ್ಡಾಟ ಪ್ರಕಾರವನ್ನು ಪ್ರದರ್ಶಿಸುವ ಅಮರೇಶ ಅವರ ಸೇವೆಯನ್ನು ಗುರುತಿಸಿ ಸರ್ಕಾರ ಇವರಿಗೆ 2023-24ನೇ ಸಾಲಿನ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.

ಹಳ್ಳಿಯಲ್ಲಿರುವ ನಮ್ಮಂತಹ ಕಲಾವಿದರನ್ನು ಗುರುತಿಸಿ ಸರ್ಕಾರ ಪ್ರಶಸ್ತಿ ನೀಡುತ್ತಿರುವುದು ತುಂಬಾ ಸಂತಸದ ವಿಚಾರವಾಗಿದೆ. ಬಯಲಾಟ ಕಲೆ ಹಿರಿಯರು ನಮಗೆ ನೀಡಿದ ಕೊಡುಗೆಯಾಗಿದೆ. ಗ್ರಾಮದ ಪ್ರತಿಯೊಬ್ಬರ ಸಹಕಾರ ಮತ್ತು ಪ್ರೋತ್ಸಾಹದಿಂದಲೇ ಪ್ರಶಸ್ತಿ ಲಭಿಸಿದೆ. | ಅರಮೇಶ ತಿಮ್ಮಯ್ಯ, ಬಯಲಾಟ(ದೊಡ್ಡಾಟ) ಕಲಾವಿದ, ವಲ್ಕಂದಿನ್ನಿ