ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಪಕ್ಷದ ಸಂವಿಧಾನಾತ್ಮಕ ಹುದ್ದೆಯಾಗಿದ್ದು, ಅದಕ್ಕೆ ಪ್ರತಿಯೊಬ್ಬರು ಗೌರವ ಕೊಡಲೇಬೇಕು. ರಾಜ್ಯಾಧ್ಯಕ್ಷ ಹುದ್ದೆಗೆ ಚ್ಯುತಿ ಬರುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಯತ್ನಾಳ್ ಮತ್ತು ಇತರೆ ಕೆಲವು ನಾಯಕರು ವ್ಯಕ್ತಿಗತವಾಗಿ ಹೋರಾಟಗಳನ್ನು ಮಾಡುತ್ತಿದ್ದು, ಪಕ್ಷದಲ್ಲಿ ಗೊಂದಲ ಸೃಷ್ಟಿಯಾದರೆ ಕಾಂಗ್ರೆಸ್‌ಗೆ ಲಾಭ ಆಗತ್ತೆ. ಬಿಜೆಪಿ ಅಧಿಕೃತವಾಗಿ ಹೋರಾಟ ಕೈಗೊಂಡಿದೆ. ಅದರ ಬಗ್ಗೆ ಮಾತ್ರ ನಾನು ಮಾತನಾಡುವೆ ಎಂದರು.
ಪಕ್ಷ ಕಟ್ಟಲು ಬಹಳಷ್ಟು ಜನ ಶ್ರಮಿಸಿದ್ದಾರೆ. ಅದರ ಫಲವಾಗಿಯೇ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಪಕ್ಷದ ಕಾರ್ಯಕರ್ತರಿಗೆ ನೋವಾಗದಂತೆ ನಾಯಕರು ನಡೆದುಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿಯ ಅಧಿಕೃತ ಅನುಮತಿ ಇರದೇ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಇತರೆ ನಾಯಕರು ಹೋರಾಟಕ್ಕೆ ನಿಂತಿದ್ದು, ಮಹಾರಾಷ್ಟ್ರ ಸೇರಿ ಹಲವೆಡೆ ಚುನಾವಣೆಗಳಿರುವ ಹಿನ್ನೆಲೆ ಈ ಬಗ್ಗೆ ಸರಿಪಡಿಸಲು ಹೈಕಮಾಂಡ್‌ಗೆ ಸಮಯ ಸಿಕ್ಕಿಲ್ಲ ಎಂದು ತಿಳಿಸಿದರು.
ಎಲ್ಲದಕ್ಕೂ ವರೀಷ್ಟರೇ ಬಂದು ಪರಿಹರಿಸಬೇಕು ಎಂದರೆ ಪಕ್ಷದ ಕಾರ್ಯಕರ್ತರಾಗಿ ನಾವಿರುವುದು ಯಾಕೆ. ತಾವು ಬೆಳೆದ ಪಕ್ಷಕ್ಕೆ ಹಾನಿ ಮಾಡೊ ನಿಟ್ಟಿನಲ್ಲಿ ಯಾರೂ ಮಾತನಾಡಬಾರದು ಎಂದರು.