ಜಿಲ್ಲೆ

ಎ.ಜೆ.ಸದಾಶಿವ ವರದಿ ಜಾರಿಗಾಗಿ ವಿಧಾನಸೌದ ಮುತ್ತಿಗೆ 11ರಂದು

ರಾಜ್ಯ ಮಾದಿಗ ದಂಡೋರ ಅಧ್ಯಕ್ಷ ಬಿ.ನರಸಪ್ಪ ದಂಡೋರ ಮಾಹಿತಿ

ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ತಕ್ಷಣವೆ ಜಾರಿಗೆ ಒತ್ತಾಯಿಸಿ ಮಾ.11ರಂದು ವಿಧಾನಸೌದ ಮುತ್ತಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಾದಿಗ ದಂಡೋರ ಅಧ್ಯಕ್ಷ ಬಿ. ನರಸಪ್ಪ ದಂಡೋರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗೆ ಸಂವಿಧಾನ ಬದ್ಧವಾಗಿ ನೀಡಿರುವ ಶೇ. 15 ಮೀಸಲಾತಿ 101 ಅಸ್ಪಶ್ಯ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ ಅದನ್ನು ಸರಿಪಡಿಸಲು 1994ರಿಂದಲೂ ಸಮಿತಿ ಹೋರಾಟ ಮಾಡುತ್ತಿದೆ. ಅದರ ಫಲವಾಗಿ ಅಧ್ಯಯನ ಮಾಡಲು ರಚಿಸಿದ ನ್ಯಾ. ಎ.ಜೆ.ಸದಾಶಿವ ಆಯೋಗದ ಶಿಫಾರಸನ್ನು ಜಾರಿಗೆ ತರಲು ಹಿಂದಿನ ಎರಡೂ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಮಾದಿಗ ಸಂಬಂಧಿತ 53 ಉಪ ಜಾತಿಗಳಿಗೆ ಒಳ ಮೀಸಲು ಕಲ್ಪಿಸಲು ಬಿಜೆಪಿ ಸರ್ಕಾರ ಶಿಫಾರಸು ಮಾಡಿದ್ದರೂ, ಅದನ್ನು ಕೇಂದ್ರಕ್ಕೆ ಕಳುಹಿಸಿ ಅನುಷ್ಠಾನಕ್ಕೆ ತಾರದೆ ರಾಜಕೀಯ ಮಾಡುತ್ತಿವೆ ಎಂದು ದೂರಿದರು.

8 ವರ್ಷಗಳ ಹಿಂದೆ ಪಡೆದ ವರದಿಯ ಶಿಫಾರಸನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಮಾ.11ರಂದು ಮಂದಕೃಷ್ಣ ಮಾದಿಗ ಹಾಗೂ ನರಸಪ್ಪ ದಂಡೋರ ನಾಯಕತ್ವದಲ್ಲಿ ಹೋರಾಟಗಾರರು, ಬುದ್ದಿಜೀವಿಗಳು, ವಿದ್ಯಾರ್ಥಿಗಳು ಅಂದು ಮಧ್ಯಾಹ್ನ 12.30ಕ್ಕೆ ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧ ಮುತ್ತಿಗೆಗೆ ತೆರಳಲಾಗುವುದು ಎಂದು ಹೇಳಿದರು.
ಕಾರ್ಯದರ್ಶಿ ಸುರೇಶ ದುಗನೂರು, ಉಸ್ತುವಾರಿ ಸಿ.ದಾಸು, ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ, ಜಿಲ್ಲಾ ಕಾರ್ಯಧ್ಯಕ್ಷ ಎಸ್.ನರಸಿಂಹಲು ಸೇರಿ ಇತರರಿದ್ದರು.