ಜಿಲ್ಲೆ

ಡಿ.4 ಅರಕೇರಾದಲ್ಲಿ ನೂತನ ರಥದ ಲೋಕಾರ್ಪಣೆ: ಚನ್ನವೀರಯ್ಯಸ್ವಾಮಿ

Gangavati - Shashidhara Shashidhara

ರಾಯಚೂರು: ಅರಕೇರಾ ಶ್ರೀ ಸೂಗುರೇಶ್ವರ ದೇವಸ್ಥಾನದಲ್ಲಿ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ನೂತನ ರಥದ ಲೋಕಾರ್ಪಣೆ ಹಾಗೂ ಧರ್ಮಸಭೆಯನ್ನು ಡಿ.4ರಂದು ಹಮ್ಮಿಕೊಳ್ಳಲಾಗಿದೆ ಎಂದು ಸೂಗುರೇಶ್ವರ ಜಾತ್ರಾ ಉತ್ಸವ ಸಮಿತಿ ಸಂಚಾಲಕ ಚನ್ನವೀರಯ್ಯಸ್ವಾಮಿ ಹಿರೆಮಠ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅಂದು ಬೆಳಿಗ್ಗೆ 9ಗಂಟೆಗೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ನಂತರ ಸೂಗುರೇಶ್ವರ ದೇವಸ್ಥಾನದ ರಥದ ಉದ್ಘಾಟನೆ ನಡೆಯಲಿದೆ. ಡಿ.2ರಿಂದ 4ರವರೆಗೆ ಶ್ರೀಶೈಲದ ವೀರಶೈವ ಗುರುಕುಲ ಸಂಸ್ಥಾಪಕ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಶಿಷ್ಯ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ಹೋಮ, ವಿಶೇಷ ಪೂಜೆಗಳು ಜರುಗಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಗಲ್ ಹಾಗೂ ಎನ್.ಗಣೇಕಲ್ ಸಂಸ್ಥಾನ ಬೃಹನ್ಮಠದ ಡಾ.ಪಂಚಾಕ್ಷರ ಶಿವಾಚಾರ್ಯ ಸ್ವಾಮಿ ವಹಿಸಿಕೊಳ್ಳಲಿದ್ದಾರೆ. ಧರ್ಮ ಸಂದೇಶವನ್ನು ಮಟಮಾರಿ ಬಿಚ್ಚಾಲಿ ಸಾವಿರ ದೇವರ ಸಂಸ್ಥಾನ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗ್ರಾಮದ ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ಶೆಟ್ಟಿ, ಶಂಕ್ರಪ್ಪ ಸಾಹುಕಾರ, ಚನ್ನಬಸವ, ಗುರುಸ್ವಾಮಿ ಸೇರಿದಂತೆ ಇತರರಿದ್ದರು.