ರಾಯಚೂರು: ರೈತ ವಿರೋಧಿ ಕಾಯ್ದೆ ವಿರೋಧಿಸಿ ದೆಹಲಿಗೆ ಹೊರಟಿರುವ ರೈತರ ಮೇಲೆ ಲಾಠಿಚಾರ್ಜ್ ನಡೆಸಿ ದಬ್ಬಾಳಿಕೆ ನಡೆಸಲಾಗಿದೆ ಎಂದು ಆರೋಪಿಸಿ ಡಿಸಿ ಕಚೇರಿ ಮುಂದೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಎಸ್‌ಎಫ್‌ಐ ಮತ್ತು ಸಿಐಟಿಯುನಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ರೈತರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು. ಕೃಷಿಯನ್ನು ಸಂರಕ್ಷಿಸಲು ಡಾ.ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಕೃಷಿ ಉತ್ಪನ್ನಗಳ ವೆಚ್ಚಕ್ಕೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರು, ಕೂಲಿಕಾರ್ಮಿಕರಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆಗಳ ಪದಾಧಿಕಾರಿಗಳಾದ ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ವರಲಕ್ಷ್ಮಿ, ಜಿಂದಪ್ಪ, ಮಾರೆಪ್ಪ ಹರವಿ, ಎಚ್.ಪದ್ಮಾ, ಆಂಜಿನಯ್ಯ, ಶಿವಕುಮಾರ ಮ್ಯಾಗಳಮನಿ, ಬಸವರಾಜ ಗಾರಲದಿನ್ನಿ, ಶ್ರೀನಿವಾಸ ಹಾಗೂ ಇತರರು ಪಾಲ್ಗೊಂಡಿದ್ದರು.