ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರಿಂದ ಪ್ರತಿಭಟನೆ

ರಾಯಚೂರು: ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸಿಐಟಿಯು ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯಲ್ಲಿ ಜುಲೈನಿಂದ ಈವರೆಗೆ ಬಾಕಿ ಇರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿ ಸರ್ವೆ ಮತ್ತು ಎಚ್‌ಎನ್‌ಎಸ್ ಸರ್ವೆ ಮಾಡಿದ ಹಣ, ಕಳೆದೆರಡು ತಿಂಗಳಿಂದ ಬಾಕಿ ಇರುವ ಅಂಗನವಾಡಿ ನೌಕರರ ವೇತನ ಸೇರಿದಂತೆ ಇನ್ನಿತರ ಹಣವನ್ನು ಬಿಡುಗಡೆಗೊಳಿಸಬೇಕು. ಅಂಗನವಾಡಿ ಕೇಂದ್ರಗಳ ದಿನಿತ್ಯದ ಚಟುವಟಿಕೆಗಳನ್ನು ದಾಖಲಿಸಲು ದಾಖಲಾತಿ ಪುಸ್ತಕಗಳು ಮತ್ತು ಅಡುಗೆ ಸಾಮಾಗ್ರಿಗಳನ್ನು ವಿತರಣೆ ಮಾಡಬೇಕು ಜತೆಗೆ ಅಂಗನವಾಡಿ ಮಕ್ಕಳಿಗೆ ಅಗತ್ಯವಾದ ಪೌಷ್ಠಿಕ ಆಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ವರ್ಗಾವಣೆಯಲ್ಲಿ ಸ್ಥಳೀಯರಿಗೆ ಮತ್ತು ಆರೋಗ್ಯ ಸಮಸ್ಯೆಗಳಿಂದ ವರ್ಗವಣೆ ಬಯಸಿದವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಖಾಯಂಗೊಳಿಸಬೇಕು. 2018ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ 26 ಸಾವಿರ ರೂ.ಗಳಿಗೆ ಗೌರವಧನವನ್ನು ಹೆಚ್ಚಿಸಬೇಕು. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ.ಗಳವರೆಗೆ ಗೌರವಧನ ಹೆಚ್ಚಳ ಮಾಡಬೇಕು. ಶಿಕ್ಷಣ ಇಲಾಖೆಯಿಂದ ಆರಂಭಿಸಿರುವ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಿಲ್ಲಿಸಿ, ರಾಜ್ಯದ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾದ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ರಂಗಮ್ಮ ಅನ್ವರ, ಖಾಜಾಂಚಿ ವರಲಕ್ಷ್ಮೀ ಪ್ರಮುಖರಾದ ಡಿ.ಎಸ್.ಶರಣಬಸವ, ಗೋಕುರಮ್ಮ, ರಮಾದೇವಿ, ಸರಸ್ವತಿ, ಮಹೇಶ್ವರಿ, ಸುಜಾತಾ, ರೂಪಾ, ಲಕ್ಮೀ ಸೇರಿದಂತೆ ಇತರರಿದ್ದರು.