ರಾಯಚೂರು: ಬಿಸಿಯೂಟ ಯೋಜನೆ ನಿವೃತ್ತ ನೌಕರರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದಿಂದ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ಮನವಿ ಸಲ್ಲಿಸಿ, ಯಾವುದೇ ಮಾಹಿತಿಯಿಲ್ಲದೆ 60 ವರ್ಷವಾಗಿದೆ ಎಂದು ಬಿಸಿಯೂಟ ನೌಕರರನ್ನು ನಿವೃತ್ತಿಗೊಳಿಸಲಾಗಿದ್ದು, ಅವರಿಗೆ ಪರಿಹಾರವಾಗಿ ಒಂದು ಲಕ್ಷ ರೂ. ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ಯೋಜನೆ ಆರಂಭದಿಂದ ಹಲವು ಸಿಬ್ಬಂದಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ, ಸರ್ಕಾರ ರಾಜ್ಯದಲ್ಲಿ ಸುಮಾರು 12 ಸಾವಿರ ಬಿಸಿಯೂಟ ನೌಕರರನ್ನು ವಯೋ ನಿವೃತ್ತಿ ಹೆಸರಿನಲ್ಲಿ ಕೆಲಸದಿಂದ ತೆಗೆದು ಹಾಕಿದೆ. ಗೌರವಧನದ ಆಧಾರದ ಮೇಲೆ ಬದುಕು ಸಾಗಿಸುತ್ತಿದ್ದ ಸಿಬ್ಬಂದಿಗೆ ಅಘಾತವುಂಟಾಗಿದ್ದು, ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.