ಜಿಲ್ಲೆ

ಕೃಷಿ ಬಾನುಲಿ ಕೇಂದ್ರಕ್ಕೆ ವರ್ಷದ ಸಂಭ್ರಮ

  • ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಾರ ಮಾಡುವ ಯೋಜನೆ
  • ಎಫ್ಎಂ ಮೂಲಕ ಬೇಸಾಯ ಮಾಹಿತಿ

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೇವಲ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಮಾತ್ರವಲ್ಲದೇ ಹಲವು ವೈಶಿಷ್ಟೃತೆಗಳನ್ನು ಒಳಗೊಂಡಿದೆ. ವೈಶಿಷ್ಟ್ಯಗಳ ಸಾಲಿನಲ್ಲಿ ಕೃಷಿ ಸಮುದಾಯ ಬಾನುಲಿ ಕೇಂದ್ರವು ಸಹ ಒಂದು.

ಕೃಷಿ ಕ್ಷೇತ್ರದ ಸಂಶೋಧನೆಗಳು, ನವೀನ ತಾಂತ್ರಿಕತೆಗಳು ರೈತಾಪಿ ಜನರಿಗೆ ತಲುಪಿಸುವ ದೃಷ್ಠಿಯಿಂದ ಸ್ಥಾಪಿತವಾದ ಕೃಷಿ ಸಮುದಾಯ ಬಾನುಲಿ ಕೇಂದ್ರವು ಇದೀಗ ವರ್ಷ ಪೂರ್ಣಗೊಳಿಸಿದ ಸಂಭ್ರಮದಲ್ಲಿದೆ.

ಕಲ್ಯಾಣ ಕರ್ನಾಟಕದ ರೈತರ ಶ್ರೇಯೋಭಿವೃಧ್ದಿಗಾಗಿ ಸ್ಥಾಪಿತವಾದ ಬಾನುಲಿ ಕೇಂದ್ರವು ಕಲ್ಯಾಣ ಕರ್ನಾಟಕದ ರಾಯಚೂರು ಕೇಂದ್ರ ಎಫ್.ಎಂ ಕಂಪನಾಂಕ 89.6 ಮೇಗಾಹರ್ಟ್ಸನಲ್ಲಿ ಕೃಷಿ ಮತ್ತು ಮತ್ತು ಕೃಷಿಗೆ ಪೂರಕವಾದ ಮಾಹಿತಿಯನ್ನು ಪ್ರತಿದಿನವೂ ಪ್ರಸಾರ ಮಾಡುತ್ತಿದೆ.

ವ್ಯವಸ್ಥಿತ ಮತ್ತು ಅತ್ಯಾಧುನಿಕ ಉಪಕರಣಗಳೊಂದಿಗೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ರೈತರಿಗೆ ತಲುಪಿಸುತ್ತಿರುವ ಪ್ರಮಾಣಿಕ ಕಾರ್ಯವನ್ನು ಕೃಷಿ ವಿವಿಯ ಸಮುದಾಯ ಎಫ್‌ಎಂ ಕೇಂದ್ರ ಮಾಡುತ್ತಾ ಬಂದಿದೆ.

ಪ್ರತಿದಿನ ಬೆಳಿಗ್ಗೆ 6.50ರಿಂದ 7.50ವರೆಗೆ ಹಾಗೂ ಸಂಜೆ 7.45ರಿಂದ 8.45 ರವರೆಗೆ ದಿನವು ಎರಡು ತಾಸುಗಳವರೆಗೆ ರೈತರ ಕೃಷಿ ಚಟುವಟಿಕೆಗಳ ಅನುಸಾರ ಕಾರ್ಯಕ್ರಮವನ್ನು ಬಿತ್ತರಿಸುತ್ತಿದೆ. ರಾಯಚೂರು ಕೇಂದ್ರವು ಕರ್ನಾಟಕದಲ್ಲಿ ಕೃಷಿ ಸಮುದಾಯ ಬಾನುಲಿ ಕೇಂದ್ರ ಧಾರವಾಡ ಹೊರತು ಪಡಿಸಿ ರಾಜ್ಯದಲ್ಲೇ ಎರಡನೇ ಕೃಷಿ ಸಮುದಾಯ ಬಾನುಲಿ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಖ್ಯವಾಗಿ ರೈತಾಪಿ ಮತ್ತು ಗ್ರಾಮೀಣ ಭಾಗವನ್ನೇ ಕೇಂದ್ರ ಬಿಂದುವನ್ನಾಗಿಸಿ ವಿವಿಧ ರೀತಿಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ಬಾನುಲಿ ಕೇಂದ್ರವು ವ್ಯವಸ್ಥಿತ ರೀತಿಯಲ್ಲಿ ಆಗಾಧ ಪ್ರಮಾಣದ ಸಂಪನ್ಮೂಲಗಳಾದ ಕೃಷಿ ಮಹಾವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆಯಿಂದ ಕಟಾವು ಹಾಗಯೇ ಮಾರುಕಟ್ಟೆ , ಮೌಲ್ಯವರ್ಧನೆಯ ಮಾಹಿತಿಯನ್ನು ಸಹ ನೀಡುತ್ತಿದೆ.

ಕಲ್ಯಾಣ ಕರ್ನಾಟಕದ ಸಾಧಕ ರೈತ ಮತ್ತು ರೈತ ಮಹಿಳೆಯರು ಸಹ ತಮ್ಮ ಕೃಷಿ ಅನುಭವವನ್ನು ಬಾನುಲಿ ಕೇಂದ್ರದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 2023ರ ಜು.29ರಂದು ನವ ದೆಹಲಿಯ ಬಾರತೀಯ ಕೃಷಿ ಅನುಸಂಧಾನ ಪರೀಷತ್ತಿನ ಕಾರ್ಯದರ್ಶಿ ಹಾಗೂ ಮಹಾನಿರ್ದೇಶಕ ಡಾ.ಹಿಮಾಂಶು ಪಾಠಕರಿಂದ ಉದ್ಘಾಟನೆಯಾದಂತಹ ಬಾನುಲಿ ಕೇಂದ್ರವು 2023ರ ಆ.15ರಿಂದ ಅಧಿಕೃತವಾಗಿ ತನ್ನ ಕಾರ್ಯಕ್ರಮಗಳನ್ನು ಆರಂಭಿಸಿದೆ. ವಿಶ್ವವಿದ್ಯಾಲಯದ ಕಲ್ಯಾಣ ಕೃಷಿ ರೇಡಿಯೋ ರಾಯಚೂರು ಕೇಂದ್ರವು ಮುಂದೆ ಪ್ರತಿದಿನ ನಾಲ್ಕು ತಾಸಿನ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಯೋಚನೆಯಲ್ಲಿದೆ.

ಮುಖ್ಯವಾಗಿ ಹಂಗಾಮು, ಬೆಳೆಗಳಿಗೆ ಸಂಬಂಧಿಸಿದಂತೆ ನೇರ ಫೋನ್ ಇನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ರೈತರು ಗರೀಷ್ಠ ಮಟ್ಟದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
ಪ್ರತಿದಿನ ವಿಜ್ಞಾನಿಗಳ ಸಂದರ್ಶನ, ರೈತರ ಅನುಭವಗಳು, ಪೇಟೆ ಧಾರಣೆ, ಹವಾಮಾನ ವರದಿ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳು ಹಾಗೂ ವಿಶ್ವವಿದ್ಯಾಲಯ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಾನುಲಿ ವರದಿಯನ್ನು ಮತ್ತು ಗ್ರಾಮೀಣ ಭಾಗದ ಜನಪದ ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು ರೈತರು, ಸಾರ್ವಜನಿಕರು ಕೇಂದ್ರದ ಗರಿಷ್ಟ ಮಟ್ಟದ ಲಾಭವನ್ನು ಪಡೆಯಬಹುದಾಗಿದೆ.

ಬಾನುಲಿ ಕೇಂದ್ರಕ್ಕೆ ಆಧುನಿಕ ರೂಪ:

ರಾಯಚೂರು ಕೃಷಿ ಬಾನುಲಿ ಕೇಂದ್ರದ ವ್ಯಾಪ್ತಿಯು 15 ರಿಂದ 20 ಕಿಲೋ ಮೀಟರ್ ಇದ್ದು, ಶ್ರೀಘ್ರದಲ್ಲಿಯೇ ಅಂತರ್ಜಾಲ ವ್ಯವಸ್ಥೆಯೊಂದಿಗೆ ವೆಬ್ ಅಪ್ಲಿಕೇಶನ್ ಅಳವಡಿಸಲಾಗುತ್ತದೆ. ರೈತರು, ಕೇಳುಗರು ದೇಶದ ಯಾವುದೇ ಮೂಲೆಯಲ್ಲಿ ಕೇಂದ್ರದ ಕಾರ್ಯಕ್ರಮಗಳನ್ನು ಆಲಿಸುವ ವ್ಯವಸ್ಥೆ ಮಾಡುವ ಉದ್ದೇಶವನ್ನು ವಿವಿ ಹೊಂದಿದೆ. ಮುಂಬರುವ ದಿನಗಳಲ್ಲಿ ಫೇಸ್‌ಬುಕ್, ಟ್ವೀಟರ್, ಇನಸ್ಟ್ರಾಗ್ರಾಂ, ಯುಟೂಬ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕವೂ ಕೃಷಿ ಮಾಹಿತಿಯನ್ನು ನೀಡುವ ಕಾರ್ಯವನ್ನು ವಿಶ್ವವಿದ್ಯಾಲಯ ಅಳವಡಿಸಲಿದೆ.

ಕೃಷಿ ಸಮುದಾಯ ಬಾನುಲಿ ಕೇಂದ್ರದ ಸ್ಥಾಪನೆಯಿಂದ ಕೃಷಿ ವಿಸ್ತರಣೆಗೆ ಸಾಕಷ್ಟು ಪ್ರಯೋಜನ ರೈತರಿಗೆ ದೊರೆಯುತ್ತಿದ್ದು, ಕೃಷಿ ತಾಂತ್ರಿಕತೆಗಳು ಎಲ್ಲಾ ರೈತರಿಗೆ ತಲುಪಿಸುವದೇ ಕೇಂದ್ರದ ಆಶಯವಾಗಿದೆ. |ಡಾ.ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕ. ಕೃವಿವಿ., ರಾಯಚೂರು
ವಿಶ್ವವಿದ್ಯಾಲಯದ ಕಲ್ಯಾಣ ಕೃಷಿ ರೇಡಿಯೋ ರಾಯಚೂರು ಕೇಂದ್ರವು ಕಳೆದ ವರ್ಷದಿಂದ ವಿವಿಧ ಕಾರ್ಯಕ್ರಮಗಳನ್ನು ಯಾವುದೇ ತೊಂದರೆಯಿಲ್ಲದೆ ರೈತರಿಗೆ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಪ್ರಸಾರ ವ್ಯಾಪ್ತಿ ಹೆಚ್ಚಾಗಲಿದ್ದು ಸಾಮಾಜಿಕ ಜಾಲತಾಣಗಳ ಮೂಲಕವೂ ಕೃಷಿ ಮಾಹಿತಿ ನೀಡಲು ಪ್ರಯತ್ನಿಸಲಾಗುವುದು. |ಡಾ. ಪ್ರಮೋದ ಕಟ್ಟಿ, ಮುಖ್ಯಸ್ಥ ಮತ್ತು ಸಂಯೋಜಕ, ಕಲ್ಯಾಣ ಕೃಷಿ ಬಾನುಲಿ ಕೇಂದ್ರ, ಕೃವಿವಿ ರಾಯಚೂರು.