ಜಿಲ್ಲೆ

ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ: ಸಚಿವ ಎನ್.ಎಸ್ ಬೋಸರಾಜು

ರಾಯಚೂರು: ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಮಹತ್ವದ್ದಾಗಿದ್ದು, ಜಿಲ್ಲೆಯಲ್ಲಿ ಎರಡು ನದಿಗಳಿರುವ ಕಾರಣ ರಾಯಚೂರು ಕೃಷಿ ಅವಲಂಭಿತ ಪ್ರದೇಶವಾಗಿದೆ ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳು ಹಾಗೂ ಕೃಷಿ ವಿವಿ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಹೊಸ ದೃಷ್ಟಿಕೋನವನ್ನು ಪರಿಚಯಿಸಿ ಸರ್ಕಾರದ ವಿವಿಧ ಸಬ್ಸಿಡಿ ಯೋಜನೆಗಳಿಂದ ರೈತರನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸಬೇಕಾಗಿದೆ ಜತೆಗೆ ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಅಭಿವೃದ್ಧಿಗೆ ಜಿಲ್ಲಾಡಳಿತ ಹೆಚ್ಚಿನ ಒತ್ತು ನಿಡಬೇಕು ಎಂದರು.

ಜಿಲ್ಲೆಯಲ್ಲಿ ಪರಿಸರ ಹಾಗೂ ಕೃಷಿ ಸೌಲಭ್ಯಗಳಿಗೆ ಅನುಗುಣವಾಗಿ ಭತ್ತ, ಜೋಳ, ಹತ್ತಿ ಬೆಳೆಗಳನ್ನು ಬೆಳೆಯಲಾಗುತ್ತದೆ. ದೇಶದ ಆರ್ಥಿಕತೆ ಹಾಗೂ ಆಹಾರ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಕೃಷಿ ಕ್ಷೇತ್ರ ಪೂರೈಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಡಿಸಿ ಕೆ.ನಿತೀಶ, ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ , ಕೃಷಿ ವಿವಿಯ ಕುಲಪತಿ ಡಾ.ಎಂ ಹನುಮಂತಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ ಸೇರಿದಂತೆ ಇತರರಿದ್ದರು.