ಕೃಷಿ ಕಾಯ್ದೆ ವಿರೋಧಿಸಿ ರಾಯಚೂರಿನ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಹೋರಾಟಗಾರರು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿದ್ದಾಗ ಪೊಲೀಸರ ನಡುವೆ ಗುರುವಾರ ತಳ್ಳಾಟ ನಡೆಯಿತು. 
ಜಿಲ್ಲೆ

ಕೃಷಿ ಕಾಯ್ದೆ ವಿರೋಧಿಸಿ ರೈಲು ತಡೆಗೆ ಯತ್ನಿಸಿದ ರೈತರನ್ನು ಬಂಧಿಸಿ ಬಿಡುಗಡೆಗೊಳಿಸಿದ ಪೊಲೀಸರು

ರಾಯಚೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಗರದ ರೈಲ್ವೆ ನಿಲ್ದಾಣ ಮುಂಭಾಗ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ, ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಬಂಧಿಸಿ, ವಾತಾವರಣ ತಿಳಿಗೊಳಿಸಿದರು.

ರೈಲು ನಿಲ್ದಾಣದ ಮುಂದೆ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೆಳಗ್ಗೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚುವರಿ ಪಡೆ ನಿಯೋಜಿಸಿ ಅಗತ್ಯ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಈ ಸಂದರ್ಭ ಬ್ಯಾರಿಕೇಡ್ ತೆಗೆದು ನಿಲ್ದಾಣಕ್ಕೆ ನುಗ್ಗಲು ಯತ್ನಿಸುತ್ತಿದ್ದಾಗ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಈ ಸಮಯದಲ್ಲಿ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ, ನೂಕಾಟ ನಡೆಯಿತು. ರೈಲ್ವೆ ನಿಲ್ದಾಣದ ಒಳಗೆ ಬಿಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ರೈತರನ್ನ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ರೈತ ಮುಖಂಡರಾದ ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಮಹೇಶ, ಎನ್.ಎಸ್.ವೀರೇಶ, ಶರಣಪ್ಪ ಮಳ್ಳಿ, ಚನ್ನಬಸವ ಜಾನೇಕಲ್, ಮಾರೆಪ್ಪ ಹರವಿ, ಆಂಜಿನೇಯ, ಬಸವರಾಜ, ಮಲ್ಲನಗೌಡ, ಜಂಬಣ್ಣಗೌಡ, ಖಾಜಾ ಅಸ್ಲಂ ಪಾಷಾ ಹಾಗೂ ಮಹಿಳಾ ಹೋರಾಟಗಾರರು ಇದ್ದರು.