ರಾಯಚೂರು: ನಗರದ ಕೃಷಿ ವಿಜ್ಞಾಗಳ ವಿಶ್ವವಿದ್ಯಾಲಯದಲ್ಲಿ ಡಿ.7ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕೃಷಿ ಮೇಳಕ್ಕೆ ಸೋಮವಾರ ಅದ್ದೂರಿ ತೆರೆ ಬಿದ್ದಿದ್ದು, ಈಬಾರಿ ಮೇಳಕ್ಕೆ ಉತ್ತಮ ಸ್ಪಂಧನೆ ದೊರೆತಿದ್ದು, ಶನಿವಾರದಿಂದ ಸೋಮವಾರದವರೆಗೂ 5 ಲಕ್ಷೂಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ.
ಮೂರನೇ ದಿನದ ಮೇಳದಲ್ಲಿ ಹೆಚ್ಚಾಗಿ ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕೈ ಹಿಡಿದು ಸಾಲಿನಲ್ಲಿ ಮೇಳದಲ್ಲಿ ಓಡಾಡುತ್ತಿದ್ದ ಮಕ್ಕಳಿಗೆ ವಿಜ್ಞಾದ ಹೊಸ ಆವಿಷ್ಕಾರ, ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಸೇರಿದಂತೆ ಕೃಷಿ ಮೇಳವು ಸಂಭ್ರಮದ ಪ್ರವಾಸದಂತೆ ಕಂಡಿತು.
ಶನಿವಾರ ಹಾಗೂ ಭಾನುವಾರ ವಾರಾಂತ್ಯವಾದ್ದರಿಂದ ಅತಿ ಹೆಚ್ಚು ಜನರು ಮೇಳದಲ್ಲಿ ಭಾಗವಹಿಸಿದ್ದರು. ಸೋಮವಾರ ಶಾಲಾ ಮಕ್ಕಳು ಸೇರಿದಂತೆ ಸುತ್ತಲಿನ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು ಮೆರಗು ತಂದಿತ್ತು.
ಕಳೆದ ಬಾರಿಗಿಂತ ಈ ಬಾರಿಯ ಕೃಷಿ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಅದ್ದೂರಿ ಯಶಸ್ಸು ಕಂಡಿದೆ. ರಾಯಚೂರು, ಯಾದಗಿರಿ, ಕೊಪ್ಪಳ ಸೇರಿದಂತೆ ಅನೇಕ ಕಡೆಗಳಿಂದ ರೈತರು ಕೃಷಿಯ ಕುರಿತು ಮಾಹಿತಿ ಹಾಗೂ ಕೃಷಿ ಸಂಬಂಧಿಸಿದ ವಸ್ತುಗಳು, ಯಂತ್ರೋಪಕರಣಗಳನ್ನು ಕೊಳ್ಳಲು ಬಂದಿದ್ದರು.
ಸೌರಶಕ್ತಿ ಪಾರ್ಕ್, ಪ್ರಾಣಿಶಕ್ತಿ ಪಾರ್ಕ್, ಹನಿನೀರಾವರಿ, ಮಣ್ಣು ಮತ್ತು ನೀರು ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಆಹಾರ ಸಂಸ್ಕರಣೆ, ಮತ್ತು ಸಿರಿಧಾನ್ಯಗಳ ಮೌಲ್ಯವರ್ಧನೆ ಘಟಕ, ಸಮಗ್ರ ಕೃಷಿ ಪದ್ದತಿ, ಬೆಳೆಗಳ ಪ್ರಾತ್ಯಕ್ಷಿಕೆ, ಡ್ರೋನ್ ತಂತ್ರಜ್ಞಾನ, ಫಲಪುಷ್ಪ, ಮತ್ಸೃ ಮೇಳ, ಸೂಕ್ಷ್ಮ ನೀರಾವರಿ, ತೋಟಗಾರಿಕೆ, ರೇಷ್ಮೆ, ಮೇವು ಬೆಳೆಗಳ ಪ್ರಾತ್ಯಕ್ಷಿಕೆ, ಎರೆಹುಳು ಗೊಬ್ಬರ, ಸಾವಾಯುವ ಕೃಷಿ, ಹವಾಮಾನ ಘಟಕ ವಸ್ತು ಪ್ರದರ್ಶನ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿದ್ದವು.
ಮೂರೂ ದಿನಗಳು ನಗರ ಹಾಗೂ ಸುತ್ತಲಿನ ಜನರಿಗೆ ಹಾಗೂ ಮೇಳದಲ್ಲಿರುವ ವ್ಯಾಪಾರಿಗಳಿಗೆ ಜಾತ್ರೆಯ ಅನುಭವವನ್ನು ನೀಡಿದ್ದು, ಕೃಷಿ ವಿವಿಯಿಂದ ಆಯೋಜಿಸಲಾದ ಕೃಷಿ ಮೇಳ ಯಶಸ್ವಿಯಾಗಿ ಮುಗಿಯಿತು.
ಡಿ.7ರಿಂದ ಆರಂಭವಾದ ಕೃಷಿ ಮೇಳ ಡಿ.9ರವರೆಗೆ ಮೂರು ದಿನಗಳ ಕಾಲ ನಡೆದಿದ್ದು, ಮೊದಲನೇ ದಿನ 75 ಸಾವಿರಕ್ಕೂ ಹೆಚ್ಚಿನ ಜನರು ಮೇಳಕ್ಕೆ ಆಗಮಿಸಿದ್ದರು. ಎರಡನೇ ದಿನ 2.20 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಹಾಗೂ ಮೂರನೇ ದಿನ 1.75 ಲಕ್ಷಕ್ಕೂ ಹೆಚ್ಚಿನ ಜನರು ಮೇಳಕ್ಕೆ ಬಂದಿದ್ದರು. ಈವರೆಗೆ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದಾರೆ.