ಜಿಲ್ಲೆ

ಮುಂದಿನ ಪೀಳಿಗೆಗೆ ಕೃಷಿ ಆಸಕ್ತಿ ಹೆಚ್ಚು: ಕುಲಪತಿ ಹನುಮಂತಪ್ಪ ಅಭಿಪ್ರಾಯ

ರಾಯಚೂರು: ಕೃಷಿ ಮೇಳಕ್ಕೆ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಬಂದು ಮೇಳದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿಮೇಳದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಸೋಮವಾರ ಮಾತನಾಡಿ, ಕೃಷಿ ಮೇಳ ಎಂಬುವುದು ರೈತರ ಹಬ್ಬ ಕೃಷಿ ಮೇಳಕ್ಕೆ ರೈತರು ಮಾತ್ರವಲ್ಲದೇ ಎಲ್ಲ ಸಮೂಹದ ಜನರು ಭೇಟಿ ನೀಡಿ ಮೇಳದ ಉಪಯೋಗ ಪಡೆದುಕೊಂಡಿದ್ದಾರೆ. ಮೂರನೇ ಹಾಗೂ ಕೊನೆಯ ದಿನವಾದ ಇಂದು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಮುಂದಿನ ಪೀಳಿಗೆಯೂ ಕೃಷಿಯಲ್ಲಿ ತೊಡಗಿಕೊಳ್ಳುತ್ತದೆ ಎಂಬ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.

ಮೂರು ದಿನಗಳಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಜನರು ಕೃಷಿಮೇಳವನ್ನು ವೀಕ್ಷಿಸಿರುವುದು ಸಂತಸದ ವಿಚಾರವಾಗಿದ್ದು, 40 ಕ್ಕೂ ಹೆಚ್ಚಿನ ಪ್ರಗತಿಪರ ರೈತರು ಕೃಷಿ ಮೇಳದಲ್ಲಿ ತಮ್ಮ ಕೃಷಿ ಸಾಧನೆ, ಸಲಹೆಗಳನ್ನು ಇತರೆ ರೈತರೊಂದಿಗೆ ಹಂಚಿಕೊಂಡಿದ್ದಾರೆ. ಮೇಳದಲ್ಲಿ ರೈತರು ಕೃಷಿ ತಂತ್ರಜ್ಞಾನದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.

ಫಲಪುಷ್ಪ ಪ್ರದರ್ಶನ ಮತ್ತು ಮತ್ಸ್ಯ ಮೇಳ ಕೃಷಿಮೇಳದ ಪ್ರಮುಖ ಆಕರ್ಷಣೆಯಾಗಿದ್ದವು ಅದರ ಜತೆಗೆ ಕೃಷಿ ಮೇಳದಲ್ಲಿ ಇದ್ದ ಇತರೆ ವಸ್ತುಪ್ರದರ್ಶನ ಮತ್ತು ಮಾರಾಟ, ಮಾಹಿತಿ ಮಳಿಗೆಗಳೂ ಕೂಡ ಜನರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಿವೆ ಎಂದು ಹೇಳಿದರು.

ಇದೇ ವೇಳೆ ಉತ್ತಮ ಪ್ರದರ್ಶನ ನೀಡಿದ ಮಳಿಗೆಗಳಿಗೆ ಹಾಗೂ ಇಲಾಖೆಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಿ.ಮಲ್ಲಿಕಾರ್ಜುನ, ಮಲ್ಲೇಶ ಕೊಲಿಮಿ, ವಿಸ್ತರಣಾ ನಿರ್ದೇಶಕ ಡಾ.ಎನ್.ಶಿವಶಂಕರ, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ, ಕೃಷಿ ತಾಂತ್ರಿಕತೆ ವಿಭಾಗದ ಡೀನ್ ಡಾ.ಮಲ್ಲಿಕಾರ್ಜುನ ಅಯ್ಯನಗೌಡರ್, ಕೃಷಿ ವಿಭಾಗದ ಡೀನ್ ಡಾ.ಕೆ.ನಾರಾಯಣರಾವ್, ಆಡಳಿತಾಧಿಕಾರಿ ಡಾ.ಜಾಗೃತಿ ದೇಶಮಾನೆ ಸೇರಿದಂತೆ ಇತರರಿದ್ದರು.