ಜಿಲ್ಲೆ

ಕಲ್ಯಾಣ ಕರ್ನಾಟಕ ಭಾಗದ ದಿನ ಪತ್ರಿಕೆಗಳಿಗೆ ಸರ್ಕಾರದಿಂದ ಹೆಚ್ಚುವರಿ ಜಾಹಿರಾತು ನೀಡಿ: ಭೀಮರಾಯ ಹದ್ದಿನಾಳ

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ದಿನಪತ್ರಿಕೆಗಳಿಗೆ ಜಾಹಿರಾತು ನೀಡುವ ಮೂಲಕ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹದ್ದಿನಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಹೆಚ್ಚುವರಿಯಾಗಿ ಎರಡು ಜಾಹಿರಾತುಗಳನ್ನು ನೀಡಬೇಕೆಂದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಈಗ ನೀಡಲಾಗುತ್ತಿರುವ ಜಾಹಿರಾತುಗಳ ಜತೆಗೆ ಎರಡು ಹೆಚ್ಚುವರಿ ಜಾಹಿರಾತುಗಳನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಬೇಕೆಂದು ತಿಳಿಸಿದರು.

ಜಾಹಿರಾತು ನೀಡುವ ಕುರಿತು ಕ.ಕ ಭಾಗದ ಏಳು ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಮತ್ತು. ಸರ್ಕಾರದಿಂದ ಹೆಚ್ಚುವರಿ ಜಾಹಿರಾತು ನೀಡಲು ಕ್ರಮ ಕೈಗೊಳ್ಳುವಂತೆ ಸಂಘದಿಂದ ಮನವಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಚನ್ನಬಸವ ಬಾಗಲವಾಡ, ಖಾನ್‌ಸಾಬ್ ಮೋಮಿನ್ ಸೇರಿದಂತೆ ಇತರರಿದ್ದರು.