ರಾಯಚೂರು ಕೃಷಿ ವಿವಿ ಘಟಿಕೋತ್ಸವ | 436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ರಾಯಚೂರು: ಕೃಷಿಯಲ್ಲಿನ ಹಲವು ಸಮಸ್ಯೆಗಳಿಂದಾಗಿ ರೈತರು ಒಕ್ಕಲುತನ ಬಿಟ್ಟು ಬೇರೆಡೆ ವಲಸೆ ಹೋಗುತ್ತಿರುವುದು ಕೃಷಿ ಕ್ಷೇತ್ರದಲ್ಲಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿ ಮಾಡಲಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್ ಕಳವಳ ವ್ಯಕ್ತಪಡಿಸಿದರು.
ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಯ 11ನೇ ಘಟಿಕೋತ್ಸವದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ರೈತರ ವಲಸೆಯಿಂದ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ. ಕೃಷಿಯಲ್ಲಿ ದೇಶ ಸಾಕಷ್ಟು ಪ್ರಗತಿ ಹೊಂದಿದ್ದರೂ ರೈತರ ಬದುಕು ಹಸನಾಗಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡದೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದೇಶಕ್ಕೆ ಆಹಾರ ಭದ್ರತೆ ತಂದು ಕೊಡಲಾಗಿದ್ದರೂ ಇಂದಿಗೂ ದೇಶದಲ್ಲಿ ಶೇ.50ರಷ್ಟು ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.
ಹಸಿರು ಕ್ರಾಂತಿಯ ಮೂಲಕ ದೇಶಕ್ಕೆ ಆಹಾರ ಭದ್ರತೆ ಒದಗಿಸಲಾಗಿದೆ. ಆದರೆ, ಜಾಗತಿಕ ತಾಪಮಾನದಿಂದ ಹವಾಮಾನದಲ್ಲಿ ಏರಿಳಿತ, ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ದೇಶಕ್ಕೆ ಆಹಾರ ಭದ್ರತೆ, ಪೌಷ್ಟಿಕಾಂಶಯುಕ್ತ ಆಹಾರ ಉತ್ಪಾದನೆಯತ್ತ ಕೃಷಿ ವಿಜ್ಞಾನಿಗಳು ಹೆಚ್ಚಿನ ಒತ್ತು ನೀಡಬೇಕಾಗಿದೆ. ವಿಶ್ವದಲ್ಲಿ ಜಾಗತಿಕ ತಾಪಮಾನ ಕುರಿತ ವಿಷಯ ಚರ್ಚೆಯಲ್ಲಿದೆ. ಅಕಾಲಿಕ ಮಳೆ, ಪ್ರವಾಹ, ಬರ, ಹವಾಗುಣದಲ್ಲಿನ ಏರಿಳಿತದಿಂದ ಕೃಷಿಯಲ್ಲಿ ಉತ್ಪಾದನೆಗೆ ಹಿನ್ನೆಡೆಯಾಗುತ್ತಿದೆ. ಕೇಂದ್ರ ಸರ್ಕಾರ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ತಜ್ಞರು ಸೂಚಿಸಿದ ಕ್ರಮಕ್ಕೆ ಮುಂದಾಗಿದೆ ಎಂದರು.
ರಾಜ್ಯಪಾಲ ಥಾವರಚಂದ್ ಗೆಹಲೊತ್ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ವಿವಿಯ ಆಡಳಿತ, ಸಂಶೋಧನೆ, ವಿಸ್ತರಣೆ ಮತ್ತು ಸಾಧನೆ ಕುರಿತು ವಿವರಿಸಿದರು. 436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, ಬಿಎಸ್ಸಿ ಕೃಷಿಯಲ್ಲಿ 16, ಬಿಟೆಕ್‌ನಲ್ಲಿ 8, ಸ್ನಾತಕೋತ್ತರ ವಿಭಾಗದಲ್ಲಿ 14 ಮತ್ತು ಡಾಕ್ಟರೇಟ್ ವಿಭಾಗದಲ್ಲಿ 10 ಸೇರಿ ಒಟ್ಟು 48 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್, ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ, ರಿಜಿಸ್ಟ್ರಾರ್ ಡಾ.ಎಂ.ವೀರನಗೌಡ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ವ್ಯವಸ್ಥಾಪನಾ ಮಂಡಳಿ ಸದಸ್ಯರು ಇದ್ದರು.