ಜಿಲ್ಲೆ

ರಾಹುಲ್ ಗಾಂಧಿ ನಿಜಬಣ್ಣ ಅಮೆರಿಕದಲ್ಲಿ ಬಯಲು: ಬಿಜೆಪಿ ವಕ್ತಾರ ಎಂ.ಜಿ.ಮಹೇಶ್

ಮೈಸೂರು: ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ನಿಜಬಣ್ಣ ಅಮೆರಿಕ ನೆಲದಲ್ಲಿ ಬಯಲಾಗಿದ್ದು, ಮೀಸಲಾತಿ ವಿರೋಧಿ ಕಾಂಗ್ರೆಸ್ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಟೀಕಿಸಿದರು.
ದೇಶದಲ್ಲಿ ದಲಿತರ ಉದ್ಧಾರದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಅಮೆರಿಕದಲ್ಲಿ ಮೀಸಲಾತಿ ತೆಗೆಯುವ ಮಾತನ್ನಾಡಿದ್ದಾರೆ. ಅಂದು ನೆಹರು ಸಹ ಮೀಸಲಾತಿ ವಿರೋಧಿಸಿದ್ದರು. ಇದೀಗ ರಾಹುಲ್‌ಗಾಂಧಿ ಸಹ ತಾತನ ನಡೆ ಅನುಸರಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ದಲಿತ ಮುಖಂಡರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್‌ಗಾಂಧಿ ಅವರ ಈ ಹೇಳಿಕೆಯನ್ನು ಒಪ್ಪೊತ್ತಾರೊ, ಇಲ್ಲವೋ? ಎಂಬುದನ್ನು ಕೂಡಲೇ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಅನಂತಕುಮಾರ್ ಹೆಗಡೆ ಅವರ ಸಂವಿಧಾನದ ಕುರಿತ ಹೇಳಿಕೆಗೆ ಸಮಾಜದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ?. ಈ ಕುರಿತು ದಲಿತ ನಾಯಕರ ನಿಲುವೇನು? ರಾಹುಲ್ ಗಾಂಧಿ ನೀತಿ ಕಾಂಗ್ರೆಸ್ ನೀತಿಯೇ? ಪ್ರಿಯಾಂಕಾ ಗಾಂಧಿ ದಲಿತರ ಪರ ಇದ್ದರೆ ಕೂಡಲೇ ಈ ಕುರಿತು ಸ್ಪಷ್ಟೀಕರಣ ನೀಡಲಿ ಎಂದು ಆಗ್ರಹಿಸಿದರು.
ದಲಿತರಿಗೆ ಸಂಪನ್ಮೂಲ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಹೇಳಿಕೆ ನೀಡುತ್ತಾ ಬರುತ್ತಿದೆ. ಆದರೆ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಎಸ್‌ಟಿಪಿ, ಟಿಎಸ್‌ಪಿ 25 ಸಾವಿರ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು?. ಹಣ ದುರುಪಯೋಗ ಮಾಡಿಕೊಂಡವರೇ ಈ ರೀತಿಯ ಹೇಳಿಕೆ ನೀಡುವುದು ನಗೆಪಾಟಲಿನ ವಿಷಯ ಎಂದು ವ್ಯಂಗ್ಯವಾಡಿದರು.
ಅಂಬೇಡ್ಕರ್ ಅವರ ಮಾರ್ಗ, ಆದರ್ಶಗಳನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್. ಅವರನ್ನು ಹೀನಾಯವಾಗಿ ನಡೆಸಿಕೊಂಡಿತು. ಈಗ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದನ್ನು ದೇಶಾದ್ಯಂತ ಹೋರಾಟ ಮಾಡಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಅವರಿಗೆ 1984ರಲ್ಲಿ ಸಿಖ್ಖರ ನರಮೇಧ ನಡೆಸಿದ್ದು ಯಾರು? ಎಂದು ಪ್ರಶ್ನಿಸುತ್ತೇವೆ. ವಿದೇಶಿ ನೆಲದಲ್ಲಿ ಕುಳಿತು ಏನು ಬೇಕಾದರೂ ಹೇಳಿಕೆ ನೀಡಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ನಡೆಯುವುದಿಲ್ಲ ಎಂದರು.
ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಮಾಜಿ ಸಚಿವ ನಾಗೇಂದ್ರ ಎ1 ಆರೋಪಿ ಎಂದು ಇ.ಡಿ. ಚಾರ್ಜ್‌ಶೀಟ್ ಸಲ್ಲಿಸಿದೆ. ಆದರೆ ಎಸ್‌ಐಟಿ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ನಾಗೇಂದ್ರ ಹೆಸರೇ ಇಲ್ಲ. ಅವರ ಹೆಸರು ಕೈ ಬಿಡಲು ಕಾರಣವೇನು?. ಎಸ್‌ಐಟಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ತನಿಖಾ ಸಂಸ್ಥೆಯಾಗಿರುವುದರಿಂದ ಅದರ ತನಿಖೆಗೆ ಯಾವುದೇ ಬೆಲೆಯಿಲ್ಲ. ಹೀಗಾಗಿ ಎಸ್‌ಐಟಿ ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ನಿಗಮದಲ್ಲಿ ಲೂಟಿ ಮಾಡಿದ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಸಂಸದ ತುಕಾರಾಂ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಜಯರಾಂ, ಮಹೇಶ್ ರಾಜೇ ಅರಸ್, ಮಿರ್ಲೆ ಶ್ರೀನಿವಾಸಗೌಡ, ವಾಣೀಶ್ ಕುಮಾರ್ ಇದ್ದರು.