ಹುಬ್ಬಳ್ಳಿ : ಭಾರತದ ವಿರೋಧಿಗಳ ಜತೆ ಕೈ ಜೋಡಿಸುವುದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಅವಹೇಳನ ಮಾಡುವುದು ದೇಶದ್ರೋಹದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ್ರೋಹಿಗಳ ಜತೆ, ಭಾರತದ ವಿರೋಧಿಗಳ ಜತೆ ರಾಹುಲ್ ಗಾಂಧಿ ದೇಶದ ವಿರುದ್ಧವಾಗಿ, ಪ್ರಜಾಪ್ರಭುತ್ವವನ್ನು ವಿರೋಧಿಸುವ ರೀತಿ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ವಿದೇಶದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವವೇ ಇಲ್ಲ ಎನ್ನುವ ರಾಹುಲ್ ಗಾಂಧಿ, ತುರ್ತು ಪರಿಸ್ಥಿತಿ ಹೇರಿದವರು ಯಾರು ಎಂಬುದನ್ನು ಅರಿತುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಪ್ರಜಾಪ್ರಭುತ್ವ, ಸಮಾನತೆ ಎಂದು ಭಾಷಣ ಬಿಗಿಯುವ ರಾಹುಲ್ ಗಾಂಧಿ, ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಿ ನೋಡೋಣ ಎಂದು ಜೋಶಿ ಸವಾಲು ಹಾಕಿದರು.
ಚುನಾವಣಾ ಆಯೋಗದ ಬಗ್ಗೆಯೂ ರಾಹುಲ್ ಗಾಂಧಿ ಆರೋಪ ಮಾಡುತ್ತಾರೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಗೆದ್ದಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಕಾಂಗ್ರೆಸ್ ನವರಿಗೆ ಪ್ರಜಾಪ್ರಭುತ್ವ, ಚುನಾವಣಾ ಆಯೋಗ, ನ್ಯಾಯಾಂಗ ಹೀಗೆ ಸಾಂವಿಧಾನಿಕವಾಗಿ ಇರುವ ಯಾವುದರ ಮೇಲೂ ನಂಬಿಕೆಯೇ ಇಲ್ಲ. ಅನುಕೂಲ ಸಿಂಧುಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಹಿಂದು ವಿರೋಧಿ ಪಕ್ಷ. ಹಾಗಾಗಿ, ಪ್ರಧಾನಿ ಮೋದಿ, ಸಿಜೆ ಅವರ ಮನೆಯಲ್ಲಿ ಗಣಪತಿ ಪೂಜೆ ಮಾಡಿದ್ದಕ್ಕೆ ವಿರೋಧ ಮಾಡುತ್ತಿದೆ ಎಂದು ಟೀಕಿಸಿದರು.
ಹಿಂದೆ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು ಸಿಜೆಯವರ ಇಫ್ತೀಯಾರ್ ಕೂಟದಲ್ಲಿ ಭಾಗವಹಿಸಿದ್ದರು. ಆಗೇಕೆ ಆಕ್ಷೇಪಿಸಲಿಲ್ಲ? ಎಂದು ಪ್ರಶ್ನಿಸಿದರು.
ಇಲ್ಲಿ ಪ್ರಧಾನಿ ಮೋದಿ ಅವರು ಸಿಜೆ ಮನೆಗೆ ಹೋಗಿದ್ದಕ್ಕಲ್ಲ ವಿರೋಧ. ಗಣಪತಿ ಪೂಜೆ ಮಾಡಿದ್ದಕ್ಕೆ ಅವರ ವಿರೋಧ. ಹೀಗೆ ಯಾವತ್ತೂ ಹಿಂದು ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಜೋಶಿ ಕಿಡಿ ಕಾರಿದರು.