ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ನ್ಯೂ ಕ್ಯಾಂಪಸ್‌ನಲ್ಲಿ ಸಚಿವ ಎಂ.ಬಿ. ಪಾಟೀಲ ಸಿದ್ಧತೆ ಪರಿಶೀಲಿಸಿದರು. ಎಂ.ಎಸ್. ಲೋಣಿ, ಅಬ್ದುಲ್‌ಹಮೀದ್ ಮುಶ್ರೀಫ್ ಮತ್ತಿತರರಿದ್ದಾರೆ.  
ಜಿಲ್ಲೆ

ವಿಜಯಪುರಕ್ಕೆ ರಾಹುಲ್ ಗಾಂಧಿ ಆಗಮನ, ಸಿದ್ಧತೆ ಪರಿಶೀಲಿಸಿದ ಸಚಿವ ಎಂ.ಬಿ. ಪಾಟೀಲ

ವಿಜಯಪುರ: ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಗುರುವಾರ ಸಿದ್ಧತೆ ಪರಿಶೀಲಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ಏ. 26 ರಂದು ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ನಗರದ ಬಿಎಲ್‌ಡಿಇ ಸಂಸ್ಥೆಯ ನ್ಯೂ ಕ್ಯಾಂಪಸ್‌ನಲ್ಲಿ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ತನ್ನಿಮಿತ್ತ ಸಚಿವ ಎಂ.ಬಿ. ಪಾಟೀಲ ಸ್ಥಳ ಪರಿಶೀಲನೆ ನಡೆಸಿ ಸಿದ್ಧತೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ರಾಹುಲ್ ಗಾಂಧಿ ಮತಯಾಚನೆ ಮಾಡಲಿದ್ದಾರೆ. ಅದಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ವಿಶಾಲವಾದ ಪೆಂಡಾಲ್ ಹಾಕಲಾಗಿದೆ. ಈ ವೇದಿಕೆ ಹಾಗೂ ಸಾರ್ವಜನಿಕರು ಆಸೀನರಾಗುವ ಸ್ಥಳದ ವೀಕ್ಷಣೆ ನಡೆಸಿದ ಸಚಿವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸೂಚನೆ ನೀಡಿದರು.

ಬೆಳಗ್ಗೆ 11ಕ್ಕೆ ರಾಹುಲ ಗಾಂಧಿ ಪ್ರಚಾರ ಸಭೆಗೆ ಆಗಮಿಸಲಿದ್ದಾರೆ. ಸಿಎಂ ಎಸ್.ಸಿದ್ಧರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ಪಾಲ್ಗೊಳ್ಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸುವುದಾಗಿ ತಿಳಿಸಿದ್ದಾರಾದರೂ ಇನ್ನೂ ಖಚಿತವಾಗಿಲ್ಲ. ಅವರು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪ್ರಚಾರದಲ್ಲಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ದೇಶದ ಬೇರೆ ಬೇರೆ ಕಡೆ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬೇರೆ ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಕಾರಣ ವಿಜಯಪುರಕ್ಕೆ ಆಗಮಿಸುವುದು ಅನುಮಾನ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

50 ಸಾವಿರಕ್ಕೂ ಅಧಿಕ ಜನ ಭಾಗಿ

ಜಿಲ್ಲೆಯ ಎಲ್ಲ ಊರುಗಳಿಂದ 50 ಸಾವಿರಕ್ಕೂ ಹೆಚ್ಚು ಜನ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ತಿಳಿಸಿದರು.

2018ರ ಚುನಾವಣೆ ಸಂದರ್ಭದಲ್ಲಿ ಒಂದೇ ದಿನ ಸೋನಿಯಾ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿದ್ದವು. ಅಂದು ಪ್ರದಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಎರಡು ಪಟ್ಟು ಜನ ಸೋನಿಯಾ ಗಾಂಧಿಯವರ ಕಾರ್ಯಕ್ರಮಕ್ಕೆ ಬಂದಿದ್ದು ಇಂದಿಗೂ ಜನರು ಹೋಲಿಕೆ ಮಾಡಿ ಚರ್ಚಿಸುತ್ತಿರುತ್ತಾರೆ. ಶುಕ್ರವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ಧರಾಮಯ್ಯ ಕಾಂಗ್ರೆಸ್ ವಿಚಾರಗಳನ್ನು ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ಹೀಗಾಗಿ ಜಿಲ್ಲೆಯ ಜನ ಕಾರ್ಯಕ್ರಮಕ್ಕೆ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಬಹಳ ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್. ಲೋಣಿ, ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಡಾ. ಬಾಬುರಾಜೇಂದ್ರ ನಾಯಕ, ಫಯಾಜ್ ಕಲಾದಗಿ ಮತ್ತಿತರರಿದ್ದರು.