ಲಿಂಗಸುಗೂರು ಬಸ್ ನಿಲ್ದಾಣ ವೃತ್ತದಲ್ಲಿ ಬಿಜೆಪಿಯಿಂದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಮುದಗಲ್ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಪ್ರಮುಖರಾದ ಗಿರಿಮಲ್ಲನಗೌಡ ಪಾಟೀಲ್, ಈಶ್ವರ ವಜ್ಜಲ್, ಪರಮೇಶ ಯಾದವ್, ನಾರಾಯಣಪ್ಪ ನಾಯ್ಕ, ಮಲ್ಲಪ್ಪ ಹೂಗಾರ, ದ್ಯಾಮಣ್ಣ ನರಕಲದಿನ್ನಿ, ಮುತ್ತಣ್ಣ ಕರಡಕಲ್, ಬಸನಗೌಡ ಜಾವೂರ, ಅನಂತದಾಸ, ಫಕೀರಪ್ಪ ಇತರರಿದ್ದರು. 
ಜಿಲ್ಲೆ

ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಗೊಳಿಸಿ

ಲಿಂಗಸುಗೂರು: ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುವುದಾಗಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.


ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು ವಕೀಲ ಮಾತನಾಡಿ, ಅಮೆರಿಕಾದಲ್ಲಿ ರಾಹುಲ್ ಗಾಂಧಿ ಅವರು ಮೀಸಲಾತಿ ರದ್ದುಪಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದ ಏಳು ದಶಕದಿಂದ ಕಾಂಗ್ರೆಸ್ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ಬಂದಿದೆ.

ಈ ಹಿಂದೆ ನೆಹರೂ ಕೂಡ ಇಂತಹ ಹೇಳಿಕೆ ನೀಡಿದ್ದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ ಕಾಂಗ್ರೆಸ್ ಅವರ ವಿಚಾರಕ್ಕೆ ತಿಲಾಂಜಲಿ ನೀಡಲು ಹೊರಟಿದ್ದು, ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದುಪಡಿಸಬೇಕೆಂದು ಆಗ್ರಹಿಸಿದರು.


ಪ್ರಕೋಷ್ಠಗಳ ಜಿಲ್ಲಾ ಉಸ್ತುವಾರಿ ಜಗನ್ನಾಥ ಕುಲಕರ್ಣಿ ಮಾತನಾಡಿ, ಚುನಾವಣೆ ವೇಳೆ ಕಾಂಗ್ರೆಸ್ ದಲಿತರ ಮೀಸಲಾತಿ ಹಾಗೂ ಸಂವಿಧಾನದ ಕುರಿತು ಮೊಸಳೆ ಕಣ್ಣೀರು ಸುರಿಸುತ್ತಿದೆ. ಮೀಸಲಾತಿ ಎಂಬುದು ಕಾಂಗ್ರೆಸ್ ಭಿಕ್ಷೆಯಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ 106 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಗೌರವ ತೋರಿದೆ.

ಸಿಎಂ ಸಿದ್ಧರಾಮಯ್ಯ ಸರ್ಕಾರ ಎಸ್ಸಿ-ಎಸ್ಟಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ. ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಸಮುದಾಯಕ್ಕೆ ಘೋರ ಅವಮಾನ ಮಾಡುವ ಜತೆಗೆ ಎಸ್ಟಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಚುನಾವಣೆಗೆ ಬಳಸಿದ್ದಾರೆ ಎಂದು ದೂರಿದರು.