ಬೆಳಗಾವಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕುಮಾರ ಹಿರೇಮಠ ಮಾತನಾಡಿದರು. ರಮೇಶ ಚೌಗುಲಾ, ಜಗದೀಶ ಪೂಜಾರಿ, ಲಕ್ಷ್ಮಣ ದಂಡಾಪುರಿ, ರಾಜೇಂದ್ರ ಹಣಕಿ ಇತರರಿದ್ದರು. 
ಜಿಲ್ಲೆ

ರಾಹುಲ ಗಾಂಧಿ ಕೂಡಲೆ ಕ್ಷಮೆ ಕೇಳಲಿ

ಬೆಳಗಾವಿ: ಕೇಂದ್ರ ಸರ್ಕಾರದ ಅಗ್ನವೀರ ಯೋಜನೆ ವಿರೋಧಿಸುವ ಮೂಲಕ ಸೈನಿಕರಿಗೆ ಅವಮಾನ ಮಾಡಿರುವ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ ಗಾಂಧಿ ಕ್ಷಮೆ ಕೇಳಬೇಕು ಎಂದು ರಾಜ್ಯ ಬಿಜೆಪಿ ಮಾಜಿ ಸೈನಿಕರ ಪ್ರಕೋಷ್ಠ ಸಮಿತಿ ಸದಸ್ಯ ಕುಮಾರ ಹೀರೆಮಠ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ದೇಶ ಸೇವೆಗಾಗಿ ಜಾರಿಗೊಳಿಸಿರುವ ಅಗ್ನಿವೀರ ಯೋಜನೆಯಿಂದ ದೇಶದ ಭದ್ರತೆ ಮತ್ತಷ್ಟು ಬಲಿಷ್ಠಗೊಳಿಸಬೇಕು. ಈ ಯೋಜನೆಯಿಂದ ಸೈನಿಕರು ಶಿಸ್ತುಬದ್ಧತೆ ಕಲಿಯುತ್ತಾರೆ. ಅಗ್ನಿವೀರ ಬಗ್ಗೆ ಸಾಕಷ್ಟು ಪರ, ವಿರೋಧ ಚರ್ಚೆಗಳು ನಡೆದಿವೆ. ಆದರೆ ಐದು ವರ್ಷ ಸೇವೆ ಮಾಡಿದ ಬಳಿಕ ಸರ್ಕಾರಿ ಸೇವೆ ಸಲ್ಲಿಸಬಹುದು. ದೇಶ ಅಪಾಯದಲ್ಲಿದ್ದಾಗ ದೇಶದ ಸೇವೆಗೆ ಅಣಿಯಾಗಬಹುದು ಎಂದರು.

1975 ಮಹಿಳಾ ಸೈನಿಕರು ಅಗ್ನಿವೀರ ಯೋಜನೆಯಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಉತ್ತಮವಾದ ಸಂಬಳ ಸಹ ಇದೆ. ನಾಲ್ಕು ವರ್ಷದ ಸೇವೆ ಸಲ್ಲಿಸಿ ಹೊರ ಬರುವಾಗ 12 ಲಕ್ಷ ರೂ. ಸಿಗುತ್ತದೆ. ಯುವ ಸಮುದಾಯಕ್ಕೆ ಇದೊಂದು ಅವಕಾಶವಾಗಿದೆ. ಈ ಯೋಜನೆಯಿಂದ ಪ್ರತಿಯೊಬ್ಬರೂ ಸೈನಿಕರಾಗಲು ಅವಕಾಶವಿದೆ. ರಾಜಕೀಯ ಲಾಭಕ್ಕಾಗಿ ವಿರೋಧಿಸುವುದು ಸರಿಯಲ್ಲ ಎಂದರು. ದೇಶ ಸೇವೆಗಾಗಿ ಯಾವುದೇ ಜನಪ್ರತಿನಿಧಿಗಳು, ಪಕ್ಷದ ಮುಖಂಡರ ಮಕ್ಕಳು ಸೇನೆಗೆ ಸೇರುವುದಿಲ್ಲ. ಮಾಜಿ ಸೈನಿಕರು, ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುತ್ತಾರೆ. ಅಗ್ನಿವೀರ ಯೋಜನೆ ಉತ್ತಮವಾಗಿದೆ. ವಿಪಕ್ಷ ನಾಯಕ ರಾಹುಲ ಗಾಂಧಿ ಕೂಡಲೇ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಾಜಿ ಸೈನಿಕರಾದ ರಮೇಶ ಚೌಗುಲಾ, ಜಗದೀಶ್ ಪೂಜಾರಿ, ಲಕ್ಷ್ಮಣ ದಂಡಾಪುರಿ, ರಾಜೇಂದ್ರ ಹಣಕಿ, ಸಂಗಪ್ಪ ಮೇತ್ರಿ, ವಿಠ್ಠಲ ಸಾಯನ್ನವರ ಇತರರಿದ್ದರು.