ಹುಬ್ಬಳ್ಳಿ : ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೇಸ್, ಆ ಸಂದರ್ಭದಲ್ಲಿ ರೈತರ ಸಾಲ ಏಕೆ ಮನ್ನಾ ಮಾಡಲಿಲ್ಲ ? ಎಂದು ಪ್ರಶ್ನಿಸಿರುವ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ, ರಾಹುಲ್ ಗಾಂಧಿ ಬೇಜವಾಬ್ದಾರಿ ಮತ್ತು ಬರೀ ಸುಳ್ಳು ಹೇಳುವ ಮನುಷ್ಯ ಎಂದು ಆಪಾದಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಲ್ಹಾದ ಜೋಶಿ, ನರೇಂದ್ರ ಮೋದಿ ಸರ್ಕಾರ ಕೇವಲ ಹತ್ತು ವರ್ಷಗಳಲ್ಲಿ ಬರೋಬ್ಬರಿ 3 ಲಕ್ಷ ಕೋಟಿ ರೂ. ಕಿಸಾನ್ ಸಮ್ಮಾನ್ ನಿಧಿ ನೀಡಿ, ರೈತರಿಗೆ ಬೆಂಬಲವಾಗಿ ನಿಂತಿದೆ ಎಂದರು.
ರಾಹುಲ್ ಗಾಂಧಿ ರೈತರ ಸಾಲ ಮನ್ನಾ ಎಂದು ಸುಳ್ಳು ಹೇಳಿ, ಜನರ ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ. ಕಾಂಗ್ರೆಸ್ನವರು ಎಷ್ಟರ ಮಟ್ಟಿಗೆ ಜನಕ್ಕೆ ಮೋಸ ಮಾಡುತ್ತಿದ್ದಾರೆ ಎಂಬುದನ್ನು ಜನರೂ ಅರಿತಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ತಮ್ಮ ಪಕ್ಷದ ಧ್ವಜ ಚಿನ್ಹೆಗೇ ಗೌರವ ನೀಡಿಲ್ಲ. ವಯನಾಡನಲ್ಲಿ ಮುಸ್ಲಿಂ ಲೀಗ್ ಧ್ವಜ ಹಿಡಿದು ಪ್ರಚಾರ ನಡೆಸಿದ್ದಾರೆ. ಇಂತಹ ರಾಜಕಾರಣಿ ದೇಶಕ್ಕೆ ಏನು ಒಳ್ಳೆಯದು ಮಾಡುತ್ತಾರೆ ? ಎಂದು ಪ್ರಶ್ನಿಸಿದರು.
ಸಾಲ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ಉದ್ಯಮಿಗಳ ನಯ್ಯಾ ಪೈಸೆ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿಲ್ಲ. ಬದಲಾಗಿ, ಅಂತಹವರನ್ನು ಹುಡುಕಿ ಕರೆತರುವ ಕೆಲಸವನ್ನು ಮಾಡಿದೆ ಎಂದು ಸಮರ್ಥಿಸಿಕೊಂಡರು.