ಜಿಲ್ಲೆ

ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ,  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ತಾವು ಮುಸ್ಲಿಂರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ವಕ್ಫ ಬಿಲ್ ಮಂಡನೆ ಸಂದರ್ಭದಲ್ಲಿ ಸಂಸತ್ ನಿಂದ ಹೊರಗೆ ಹೋದರು. ವೋಟಿಂಗ್ ವೇಳೆಗೆ ರಾಹುಲ್ ಬಂದರು. ಅವರಿಗೆ ದೇಶದ ಜನರ ಬಗ್ಗೆ ನಿಜವಾದ ಕಾಳಜಿ ಇಲ್ಲವೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜಕಾರಣದಲ್ಲಿದ್ದವರಿಗೆ ಸೌಜನ್ಯ ಇರಬೇಕು. ಆದರೆ, ರಾಹುಲ್ ಗಾಂಧಿಗೆ ಅದ್ಯಾವುದೂ ಇಲ್ಲ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಹತಾಶೆಯಿಂದ ಏನೇನೊ ಮಾತನಾಡುತ್ತಾರೆ. ವಯನಾಡಿನಲ್ಲಿ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಎಂದರು.

ವಕ್ಫನಲ್ಲಿ ಪ್ರಮುಖ ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆ ತಿಳಿದುಕೊಳ್ಳದ ಗಾಂಧಿ ಕುಟುಂಬದವರು ಇದೀಗ ಕ್ರಿಶ್ಚಿಯನ್ನರ ಆಸ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ಇದುವರೆಗೂ ಅವರ ಬಗ್ಗೆ ಚಕಾರ ಎತ್ತದ ರಾಹುಲ್ ವಕ್ಫ ವಿಚಾರದ ನಂತರ ಇಲ್ಲದ ಕಾಳಜಿ ತೋರಿಸುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟರೆ ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಇರುವ ಕಡೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಕಾನೂನುಬಾಹಿರ ಚಟುವಟಿಕೆ ಇದ್ದೇ ಇರುತ್ತವೆ ಎಂದು ಆರೋಪಿಸಿದರು.

ಅಭಿವೃದ್ಧಿಗೆ ಹಣ ಇಲ್ಲ: ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ 51 ಸಾವಿರ ಕೋಟಿ ರೂಪಾಯಿಗಾಗಿ ತೆರಿಗೆ ಹಾಗೂ ಬೇರೆ ಮೂಲದಿಂದ ಸುಮಾರು 70-  80 ಸಾವಿರ ಕೋಟಿಯಷ್ಟು ಸಂಗ್ರಹ ಮಾಡುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳು ಅನೇಕರಿಗೆ ತಲುಪುತ್ತಿಲ್ಲ ಎಂಬ ದೂರುಗಳಿವೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಜನರ ಹಣ ಲೂಟಿ ಮಾಡುತ್ತಿದೆಯೇ? ಎಂದು ಪ್ರಶ್ನಿಸಿದರು.

ನಗರದ ಒಂದು ರಸ್ತೆಯ ಗುಂಡಿ ಮುಚ್ಚಲು ಸರ್ಕಾರದ ಬಳಿ ದುಡ್ಡಿಲ್ಲ. ಜನರು ತೊಂದರೆಯಲ್ಲಿದ್ದಾರೆ. ಸದ್ಯ ಕೆಲ ರಸ್ತೆಗಳ ಸುಧಾರಣೆಯು ಕೇಂದ್ರದ ಅನುದಾನದಲ್ಲಿ ಆಗುತ್ತಿವೆ. ಅಧಿಕಾರಿಗಳ ಮಧ್ಯ ಸಮನ್ವಯದ ಕೊರತೆಯಿಂದ ಸುಧಾರಣೆಯಾದ ರಸ್ತೆಯನ್ನೇ ಮತ್ತೆ ಅಗೆಯುವ ಪ್ರಸಂಗಗಳು ಬರುತ್ತಿವೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅಧಿಕಾರಿಗಳ ಸಭೆ ಮಾಡಿ ಸೂಕ್ತ ನಿರ್ದೇಶನ ಕೊಡಬೇಕು ಎಂದರು.

ಧ್ವಜಾರೋಹಣ: ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಹಾಗೂ ಇತರ ಮುಖಂಡರು ಧ್ವಜಾರೋಹಣ ನೆರವೇರಿಸಿದರು.

ಸುಮಾರು 15 ಕೋಟಿ ಸದಸ್ಯರನ್ನು ಒಳಗೊಂಡ ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದ 15 ರಾಜ್ಯಗಳಲ್ಲಿ ಅಂದರೆ ಭೌಗೋಳಿಕವಾಗಿ ಶೇ. 75 ಭಾಗದಲ್ಲಿ ಪಕ್ಷದ ಆಡಳಿತ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಇನ್ನೂ ಹಲವಾರು ವರ್ಷ ಪಕ್ಷವು ದೇಶದಲ್ಲಿ ಆಡಳಿತ ನಡೆಸಲಿದೆ ಎಂದು ಜೋಶಿ ಹೇಳಿದರು.