ಜಿಲ್ಲೆ

ರಾಹುಲ್ ಗಾಂಧಿ ದೋಷಿ: ಕಾಂಗ್ರೆಸ್ ಪ್ರತಿಭಟನೆ, ಕಾರ್ಯಕರ್ತರು ಪೊಲೀಸ್ ವಶಕ್ಕೆ

Shivamogga

ಶಿವಮೊಗ್ಗ: ಮೋದಿ ಎಂಬ ಉಪನಾಮ ಇಟ್ಟುಕೊಂಡವರೆಲ್ಲರೂ ಕಳ್ಳರಂದು ಹೇಳಿಕೆ ನೀಡಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ಗುರುವಾರ ಜಿಲ್ಲಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಲ್ಲದೆ ರಸ್ತೆ ನಡೆಸಿದ ಯುವ ಕಾಂಗ್ರೆಸ್‌ನ 30ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಆನಂತರ ಬಿಡುಗಡೆಗೊಳಿಸಿದರು.

ಕೇಂದ್ರ ಸರ್ಕಾರದ ದ್ವೇಷ ಮತ್ತು ತಾರತಮ್ಯ ಹಾಗೂ ಪಿತೂರಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಮಹಾವೀರ ವೃತ್ತದಲ್ಲಿ ಪ್ರತಿಭಟಿಸಿದರು.

ಜಿಲ್ಲಾ ಕಾಂಗ್ರೆಸ್ ಭವನದಿಂದ ಪ್ರತಿಭಟನೆ ಆರಂಭಸಿ ಬಾಲರಾಜ್ ಅರಸ್ ರಸ್ತೆಯ ಮುಖಾಂತರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪದೇ ಪದೇ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ಶಿವಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ: ಶಿವಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

2019ರ ಲೋಕಸಭೆ ಚುನಾವಣೆ ಸಂದರ್ಭ ಕೋಲಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಮೋದಿ ಎಂಬ ಉಪ ನಾಮ ಹೊಂದಿರುವ ಎಲ್ಲರೂ ಕಳ್ಳರೆಂದು ಜರಿದಿದ್ದರು. ನೀರವ್ ಮೋದಿ, ಲಲಿತ್ ಮೋದಿ ಮತ್ತು ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿಸಿದ್ದರು. ಈ ವಿಚಾರದಲ್ಲಿ ವ್ಯಂಗ್ಯ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕ ಪೂರ್ಣೇಶ್ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಗುರುವಾರ ಆ ಕೇಸಿನ ವಿಚಾರಣೆ ನಡೆದು ಸೂರತ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ತೀರ್ಪು ನೀಡಿರುವುದು ಬಿಜೆಪಿಯ ಷಡ್ಯಂತ್ರ ಎಂದು ದೂರಿದರು.