ಹುಬ್ಬಳ್ಳಿ: ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿರುವ ಹುಬ್ಬಳ್ಳಿಗೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕೆಲವು ನಿಮಿಷಗಳ ಹಿಂದೆ ಆಗಮಿಸಿದ್ದು, ಸಭೆ ನಡೆಯಲಿರುವ ಖಾಸಗಿ ಹೋಟೆಲ್ಗೆ ಕೆಪಿಸಿಸಿ ನಾಯಕರೊಂದಿಗೆ ಪ್ರವೇಶ ಮಾಡಿದ್ದಾರೆ.
ವಿಮಾನ ನಿಲ್ದಾಣದಿಂದ ಅವರನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಕೊಂಡು ಹೋಟೆಲ್ಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚೂಕಡಿಮೆ ಒಂದೂವರೆ ಗಂಟೆ ತಡವಾಗಿ ರಾಹುಲ್ ಗಾಂಧಿ ಆಗಮಿಸಿದ್ದರಿಂದ ರಾತ್ರಿ 8 ಗಂಟೆಗೆ ನಡೆಯಬೇಕಿದ್ದ ಸಭೆ ಇನ್ನೇನು ಆರಂಭಗೊಳ್ಳಲಿದೆ.
ಗೋಕುಲ ರಸ್ತೆಯ ಫಾರ್ಚೂನ್ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಹೋಟೆಲ್ಗೆ ಕಾಂಗ್ರೆಸ್ ನಾಯಕರು ಪ್ರವೇಶಿಸಲು ಮುಂದಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಆದರೆ ಪಾಸ್ ಇದ್ದವರನ್ನು ಮಾತ್ರ ಬಿಡುತ್ತಿದ್ದು, ತಮ್ಮನ್ನೂ ಒಳ ಬಿಡುವಂತೆ ಕೆಲ ನಾಯಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದೂ ಕಂಡುಬಂತು. ಇನ್ನು ಮುಂಚಿತವಾಗಿ ರೂಮ್ ಬುಕ್ ಮಾಡಿರುವ ಗ್ರಾಹಕರು ಕೂಡ ಈ ವೇಳೆ ಪರದಾಡುವಂತಾಗಿತ್ತು. ಹೋಟೆಲ್ನಲ್ಲಿ ತಮಗೆ ಪ್ರೆಸಿಡೆನ್ಷಿಯಲ್ ಸೂಟ್ ಬೇಡ ಎಂದು ಹೇಳಿರುವ ರಾಹುಲ್ ಗಾಂಧಿ, ಸಾಮಾನ್ಯ ರೂಮ್ ಬುಕ್ ಮಾಡುವಂತೆ ಸೂಚಿಸಿದರು.
ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಮುಂದಿನ ಚುನಾವಣಾ ತಂತ್ರಗಳ ಕುರಿತು ಪ್ರಮುಖವಾಗಿ ಚರ್ಚೆ ಆಗಲಿದೆ ಎನ್ನಲಾಗಿದೆ. ಸಭೆ ಆರಂಭವೇ ತಡವಾಗಿರುವುದರಿಂದ, ಸಭೆಯ ಚರ್ಚೆಯ ವಿವರಗಳು ಮಧ್ಯರಾತ್ರಿಯ ಸುಮಾರಿಗೆ ಹೊರಬೀಳಲಿವೆ ಎಂದು ನಿರೀಕ್ಷಿಸಲಾಗಿದೆ.