ಜಿಲ್ಲೆ

ಗೋ ಬ್ಯಾಕ್ ಪರಿಸ್ಥಿತಿ ಬಂದಿಲ್ಲ : ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿಕೆ

Mangaluru - Hariprasad Rai



ಮಂಗಳೂರು : 70 ವರ್ಷ ಮೇಲ್ಪಟ್ಟವರು, ವಿಧಾನಸಭೆ ಚುನಾವಣೆಯಲ್ಲಿ ಸೋತವರನ್ನು ಬಿಜೆಪಿಯಲ್ಲಿ ಲೋಕಸಭೆಗೆ ನಿಲ್ಲಿಸಲಾಗಿದೆ. ಇಂತಹವರನ್ನು ಉದ್ದೇಶಿಸಿದ ಅವರು ಈ ಮಾತು ಹೇಳಿರಬಹುದು. ತಾನು ಮುಖ್ಯಮಂತ್ರಿಯಾಗಬೇಕು, ತನ್ನ ಪುತ್ರ ಅಧ್ಯಕ್ಷನಾಗಬೇಕು ಎಂಬ ನಾಯಕರಿಗೂ ಹೇಳಿರಬಹುದು ...ಇದು ವಿಧಾನಪರಿಷತ್ ಚುನಾವಣೆಯ ನೈಋತ್ಯ ಪದವೀಧರ ಕ್ಷೇತ್ರದ
ಅಭ್ಯರ್ಥಿ ರಘುಪತಿ ಭಟ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ನೀಡಿದ ಹೇಳಿಕೆ ಸಂಬಂಧಿಸಿ ನೀಡಿದ ಪ್ರತಿಕ್ರಿಯೆ.
ಕೆಲವರಿಗೆ ಅಧಿಕಾರ ಇಲ್ಲದೆ ಇರಲು ಆಗುವುದಿಲ್ಲ ಎಂದು ಬಿ.ಎಲ್. ಸಂತೋಷ್ ಅವರು ನೀಡಿದ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಘುಪತಿ ಭಟ್ ‘ ನಾನು ಯಾವುದೇ ಚುನಾವಣೆಯಲ್ಲಿ ಸೋತಿಲ್ಲ. ಕಾರ್ಯಕರ್ತರು ನನ್ನನ್ನು ವಿರೋಧಿಸಿ ಗೋಬ್ಯಾಕ್ ಅಂದಿಲ್ಲ. ನಮ್ಮಲ್ಲಿ ಗೋಬ್ಯಾಕ್ ಅಂದವರಿಗೆ ಬೇರೆ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ನನಗೆ ಅಂತಹ ಪರಿಸ್ಥಿತಿ ಬಂದಿಲ್ಲ. ನಕ್ಸಲ್‌ವಾದಿಗಳ ಜತೆ ಸೇರಿ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದ ವ್ಯಕ್ತಿಗೆ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಲಾಗಿದೆ .
ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಿದ ಮಾನದಂಡಗಳ ಅವರು ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದರು.
ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಮತ್ತೆ ಚುನಾವಣಾ ರಾಜಕೀಯದಲ್ಲಿ ಇರಲು ಸಾಧ್ಯವಾಗದು.
ಕೇವಲ ಕಾರ್ಯಕರ್ತನಾಗಿ ಇರಬೇಕಾಗುತ್ತದೆ. ವಿಧಾನಸಭೆಗೆ ಇನ್ನು ನಾಲ್ಕು ವರ್ಷ ಕಾಯುವುದಾದರೆ ಅಲ್ಲಿ ನಾನೇ ಗೆಲ್ಲಿಸಿದ ಶಾಸಕರಿದ್ದು, ಮತ್ತೆ ಸ್ಪರ್ಧಿಸಲು ಆಗದು. ಲೋಕಸಭೆಯಲ್ಲಿ ನಮ್ಮದು ಸಣ್ಣ ಮತದಾರರ ಜಾತಿ ಎನ್ನುವ ಕಾರಣಕ್ಕೆ ಸ್ಪರ್ಧೆ ಸಾಧ್ಯವಿಲ್ಲ. ಹಾಗಾಗಿ ಪದವೀಧರ ಮತದಾರರನ್ನು ವಿಶ್ವಾಸದಲ್ಲಿಟ್ಟು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದರು.
*ಸಾಧನೆಯ ಆಧಾರದಲ್ಲಿ ಗೆಲುವು
ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಹಿಂದೆ ಪಕ್ಷದ ಆಧಾರದಲ್ಲಿ ಗೆಲುವು ಸಾಧಿಸಲಾಗುತ್ತಿತ್ತು. ಆದರೆ ಈ ಬಾರಿ ಗೆಲುವಿಗೆ ಅಭ್ಯರ್ಥಿಯ ಸಾಧನೆಯೇ ಪ್ರಮುಖವಾಗಲಿದೆ. ಪದವೀಧರ ಮತದಾರರು ಪ್ರಬುದ್ಧರಾಗಿದ್ದು, ಎಲ್ಲ ವಿಷಯ ಅರಿತು ಮತದಾನ ಮಾಡುವ ವಿಶ್ವಾಸವಿದೆ. ಶಾಸಕನಾಗಿ ನಾನು ಮಾಡಿದ ಸಾಧನೆಗಳು ಮತದಾರರ ಗಮನದಲ್ಲಿದೆ. ಪರಿಷತ್‌ಗೆ ಆಯ್ಕೆಯಾದರೆ ಕರಾವಳಿ ಮತ್ತು ಮಲೆನಾಡಿನ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ’ ಎಂದು ರಘುಪತಿ ಭಟ್ ಹೇಳಿದರು.
ಪದವೀಧರರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಂಕಿಅಂಶ ಆಧಾರಿತ ಜಾಲವೊಂದನ್ನು ರಚಿಸಿ ಕಾರ್ಯೋನ್ಮುಖವಾಗಲು
ನಿರ್ಧರಿಸಿದ್ದೇನೆ. ಸರ್ಕಾರಿ ಉದ್ಯೋಗಕ್ಕೆ ಸೇರಲು ಬಯಸುವ ಪದವೀಧರರಿಗೆ ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ ಎಂದು ಅವರು ಹೇಳಿದರು.
*ಒಂದೇ ಬಾರಿ ನೋಂದಣಿಗೆ ವ್ಯವಸ್ಥೆ :
ಸುಮಾರು 25 ಲಕ್ಷ ಪದವೀಧರರು ಇರುವ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ನೋಂದಣಿಯಾದ ಮತದಾರರ ಸಂಖ್ಯೆ 85000 ಮಾತ್ರ . ಒಮ್ಮೆ ಪದವಿ ಪಡೆದರೆ ಅದು ಶಾಶ್ವತ. ಹಾಗಾಗೀ ಆರು ವರ್ಷಗಳಿಗೊಮ್ಮೆ ನೋಂದಣಿ ಅಗತ್ಯವಿಲ್ಲ. ಈ ವ್ಯವಸ್ಥೆಯನ್ನು ಬದಲಾಯಿಸ ಬೇಕಾಗಿದೆ. ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತುವ ಮೂಲಕ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಗಮನ ಸೆಳೆಯುವ ಕೆಲಸ ಮಾಡುವುದಾಗಿ ರಘುಪತಿ ಭಟ್ ಹೇಳಿದರು.
ಮಾಜಿ ಕಾರ್ಪೋರೇಟರ್‌ಗಳಾದ ನವೀನ್‌ಚಂದ್ರ, ಅಶ್ವಿನ್ ಕುಮಾರ್, ಉದ್ಯಮಿ ಸೂರಜ್ ಕಲ್ಯ, ರಾಘವೇಂದ್ರ, ಕೃಷ್ಣ ಶೆಣೈ, ಸಂತೋಷ್ ರಾವ್ ಉಪಸ್ಥಿತರಿದ್ದರು.