ಹೊಸಪೇಟೆ: ರ‍್ಯಾಗಿಂಗ್ ನೆಪದಲ್ಲಿ ಮಾನಸಿಕ, ದೈಹಿಕ ಹಾಗೂ ಲೈಗಿಂಕ ಕಿರುಕುಳ ನೀಡುತ್ತಿರುವುದು ಸಮಾಜದ ಬಹುದೊಡ್ಡ ಪಿಡುಗಾಗಿ ಪರಿಣಮಿಸುತ್ತಿದೆ. ಇದನ್ನು ಆರಂಭದಲ್ಲೇ ನಿಯಂತ್ರಿಸದಿದ್ದರೆ. ಭವಿಷ್ಯದಲ್ಲಿ ಮಾರಕವಾಗುವುದು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಲ್. ಜನಾರ್ದನ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ರ‍್ಯಾಗಿಂಗ್ ತಡೆ ಘಟಕದಿಂದ ಭುವನ ವಿಜಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರ‍್ಯಾಗಿಂಗ್ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಮತ್ತು ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ಹೆಚ್ಚಾಗಿ ಕಂಡು ಬರುತ್ತದೆ. ಇತ್ತೀಚೆಗೆ ಜಾತಿ, ಧರ್ಮ, ವರ್ಣ, ಆಧಾರದ ಮೇಲೆ ರ‍್ಯಾಗಿಂಗ್ ಮಾಡುವ ಪ್ರವೃತ್ತಿ ಬೆಳೆದಿದೆ. ಇದು ಭಾರತೀಯರ ಸಂಸ್ಕೃತಿ ಅಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನೊಂದು ಕಾಲೇಜು ಬಿಡುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಭಯದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕದೇ ಹಿಂದುಳಿಯಲು ಕಾರಣವಾಗಿದೆ. ಯುವ ಜನತೆಯನ್ನ ತಪ್ಪು ದಾರಿಗೆ ಪ್ರಚೋದನೆ ನೀಡುವುದು ರ‍್ಯಾಗಿಂಗ್‌ನ ಇನ್ನೊಂದು ಮುಖವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತವುಗಳನ್ನು ಶೈಕ್ಷಣಿಕ ಮಟ್ಟದಲ್ಲಿಯೇ ತಡೆಯಲು ಯು.ಜಿ.ಸಿ. ಯು ರ‍್ಯಾಗಿಂಗ್‌ನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸುವುದು ಕಡ್ಡಾಯ. ವಿಶ್ವವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ಘಟಕ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯೆ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಬದಲಿಗೆ ರ‍್ಯಾಗಿಂಗ್‌ಗೆ ಬಲಿಯಾಗಿ ತಮ್ಮ ಭವಿಷ್ಯವನ್ನೇ ಅಂಧಕಾರಕ್ಕೆ ದೂಡಬಾರದು. ರ‍್ಯಾಂಗಿAಗ್ ನಿಂದ ನೊಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಘಟನೆಗಳು ನಮ್ಮ ಕಣ್ಮುಂದೆ ಇವೆ ಎಂದು ಆತಂಕ ವ್ಯಕ್ತಪಡಿಸಿದರು ಅವರು, ವಿದ್ಯಾರ್ಥಿಗಳು ಪರಸ್ಪರ ಸ್ನೇಹ ಮನೋಭಾವದಿಂದ ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು.
ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ಪ್ರಮಾಣ ಕಡಿಮೆ. ಆದರೆ, ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಇದು ದೊಡ್ಡದಾದ ಪ್ರಭಾವ ಬೀರಿದೆ. ಈ ಹಿಂದೆ ಅಧ್ಯಾಪಕರು ಕೂಡ ರ‍್ಯಾಗಿಂಗ್‌ನ ಕಹಿ ಅನುಭವಗಳಿಗೆ ಒಳಗಾದ ಉದಾಹರಣೆಗಳಿವೆ. ರ‍್ಯಾಂಗಿAಗ್ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದ್ದು, ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ರ‍್ಯಾಗಿಂಗ್ ತಡೆ ಘಟಕದ ನೋಡಲ್ ಅಧಿಕಾರಿ ಡಾ. ಜನಾರ್ದನ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಉಪಸ್ಥಿತರಿದ್ದರು.