ಜಿಲ್ಲೆ

ಮಳೆಯಿಲ್ಲದೆ ಒಣಗುತ್ತಿದೆ ರಾಗಿ ಬೆಳೆ ; ಕೈಕೊಟ್ಟ ಉತ್ತರೆ ಮಳೆ ; ಬಿಸಿಲಿನ ತಾಪಕ್ಕೆ ಬಾಡಿದ ಪೈರು

ಚಿಕ್ಕನಾಯಕನಹಳ್ಳಿ : ವಾಡಿಕೆಯಂತೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬಿಸಿಲಿನ ತಾಪಕ್ಕೆ ರಾಗಿಬೆಳೆ ಒಣಗುತ್ತಿದ್ದು, ನಾಲ್ಕೈದು ದಿನಗಳಲ್ಲಿ ಮಳೆ ಬಾರದಿದ್ದರೆ ಈ ವರ್ಷದ ರಾಗಿಬೆಳೆ ನೆಲಕಚ್ಚಿಲಿದೆ.

ಮುಂಗಾರಿನ ಪ್ರಾರಂಭದಲ್ಲಿ ಬಿದ್ದ ಮಳೆಗೆ ಬಿತ್ತನೆಯಾದ ರಾಗಿಯು ಮೊಳೆಕೆಯೊಡೆದು ತಾಕು ಬೆಳೆದರೂ ಬೆಳೆಯುವ ಪೈರಿಗೆ ಅಗತ್ಯವಾಗಿ ಬೇಕಾಗಿದ್ದ ಸಮಯದಲ್ಲಿ ಉತ್ತರ ಮಳೆ ಬಾರದೇ ಬಿಸಿಲಿನ ತಾಪಕ್ಕೆ ಬೆಳೆದ ಪೈರು ಒಣಗುತ್ತಿದೆ.

ತಾಲೂಕಿನಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಗುರಿಯಂತೆ ರಾಗಿ ಬೆಳೆಯನ್ನು ಒಟ್ಟು 25343 ಹೆಕ್ಟರ್‌ಗಳಲ್ಲಿ ಬಿತ್ತನೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ 20980 ಹೆಕ್ಟರ್‌ಗಳಲ್ಲಿ ಬಿತ್ತನೆಯಾಗುವ ಮೂಲಕ ಶೇ.82.78 ಬಿತ್ತನೆಯಾಗಿರುವುದು ವರದಿಯಾಗಿದೆ.

ಕಸಬಾ ಹೋಬಳಿಗೆ 3000 ಹೆಕ್ಟರ್ ಗುರಿ ನಿಗದಿಪಡಿಸಿದ್ದು, ಇದರಲ್ಲಿ 2400 ಬಿತ್ತನೆ ಮಾಡಲಾಗಿದೆ. ಶೆಟ್ಟಿಕೆರೆ ಹೋಬಳಿಗೆ 4000 ಹೆಕ್ಟರ್ ಗುರಿ ನಿಗದಿಪಡಿಸಿದ್ದು, ಇದರಲ್ಲಿ 3200ಹೆಕ್ಟರ್ ಬಿತ್ತನೆಯಾಗಿದೆ. ಕಂದಿಕೆರೆ ಹೋಬಳಿಗೆ 4000ಹೆಕ್ಟರ್ ಬಿತ್ತನೆ ಗುರಿನಿಗದಿಪಡಿಸಲಾಗಿದ್ದು, 3230ಹೆಕ್ಟರ್ ಬಿತ್ತನೆಯಾಗಿದೆ, ಹಂದನಕೆರೆ ಹೋಬಳಿಗೆ 6300 ಹೆಕ್ಟರ್ ಗುರಿನಿಗದಿ ಪಡಿಸಲಾಗಿದ್ದು 5750ಹೆಕ್ಟರ್ ಬಿತ್ತನೆಯಾಗಿದೆ. ಹುಳಿಯಾರು ಹೋಬಳಿಗೆ 8043ಹೆಕ್ಟರ್ ನಿಗದಿಪಡಿಸಲಾಗಿದ್ದು, ಇದರಲ್ಲಿ 6400ಹೆಕ್ಟರ್ ಬಿತ್ತನೆಯಾಗಿದೆ. ರೈತರು ಮಳೆಬಂದ ಅವಧಿಯಿಂದಲು ಜಮೀನುಗಳನ್ನು ಹಸನು ಮಾಡಿಕೊಂಡು ರಾಗಿಯನ್ನು ಸಮಯಕ್ಕೆ ಸರಿಯಾಗಿ ಬಿತ್ತನೆಮಾಡಿದರೂ ಮಳೆ ಸರಿಯಾಗಿ ಬಾರದೇ ರಾಗಿ ಒಣಗಲು ಪ್ರಾರಂಭವಾಗಿದ್ದು, ಹುಳಿಯಾರು, ಹಂದನಕೆರೆ ಭಾಗದಲ್ಲಿ ಬಹುತೇಕ ರಾಗಿಬೆಳೆ ನೆಲಕಚ್ಚಿದೆ.

ನಾಲ್ಕು ಎಕರೆ ಖುಷ್ಕಿ ಭೂಮಿಯಲ್ಲಿ ರಾಗಿ ಬಿತ್ತನೆ ಮಾಡಿದ್ದು, ಸ್ವಲ್ಪ ಮಟ್ಟಿಗೆ ಬೆಳೆದಿದೆ. ಈಗ ಮಳೆಯ ಅವಶ್ಯಕತೆಯಿದ್ದು ತಕ್ಷಣದಲ್ಲಿ ಮಳೆ ಬಾರದಿದ್ದರೆ ಬಿತ್ತಿರುವ ರಾಗಿಯು ಕೈಸೇರುವುದಿಲ್ಲ. ಕನಿಷ್ಠ ದನ ಕರುಗಳಿಗೆ ಮೇವು ಸಹ ಇಲ್ಲದಂತಾಗುತ್ತದೆ. ಕೆಂಚಪ್ಪ, ತಮ್ಮಡಿಹಳ್ಳಿ ಹುಳಿಯಾರು ಹೋಬಳಿ ತಾಲೂಕಿನಾದ್ಯಂತ ಪ್ರವಾಸ ಮಾಡುವ ಮೂಲಕ ರಾಗಿ ಬೆಳೆ ವೀಕ್ಷಿಸಿದ್ದು, ತಕ್ಷಣಕ್ಕೆ ರಾಗಿಬೆಳೆಯ ತಾಕಿಗೆ ಮಳೆಯ ಅವಶ್ಯಕತೆ ಇದೆ. ಹುಳಿಯಾರು, ಹಂದನಕೆರೆ ಭಾಗದಲ್ಲಿ ಹೆಚ್ಚು ರಾಗಿ ಬಿತ್ತನೆಯಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆ ಬಂದರೆ ರೈತರ ಮುಖದಲ್ಲಿ ಖುಷಿ ಕಾಣಬಹುದು. ಆದರೆ, ವಾಡಿಕೆಯಂತೆ ಮಳೆ ಬರಬೇಕಾಗಿದೆ. ಹನುಮಂತರಾಜು ಸಹಾಯಕ ಕೃಷಿ ನಿರ್ದೇಶಕ