ಜಿಲ್ಲೆ

ರಾಗಿ ಖರೀದಿ ನೋಂದಣಿ ಕೇಂದ್ರದಲ್ಲಿ ಸೌಲಭ್ಯ ಒದಗಿಸಿ

ರೇಷ್ಮೆ ನಗರ ಡೆಸ್ಕ್

ಮಾಗಡಿ : ರಾಗಿ ಖರೀದಿ ನೋಂದಣಿ ಕೇಂದ್ರದಲ್ಲಿ ರೈತರಿಗೆ ಮೂಲ ಸೌಲಭ್ಯ ಒದಗಿಸುವಂತೆ ರಾಜ್ಯ ಕೆಂಪೇಗೌಡ ರೈತ ಸಂಘಟನೆಯ ಅಧ್ಯಕ್ಷ ಬಾಳೇನಹಳ್ಳಿ ಶಿವಣ್ಣಗೌಡ ಆಗ್ರಹಿಸಿದರು.

ಪಟ್ಟಣದ ಗುಡೇಮಾರನಹಳ್ಳಿ ರಸ್ತೆಯ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ರೈತರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ತಾಲೂಕಿನಾದ್ಯಂತ ಸಾವಿರಾರು ರೈತರು ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ನೋಂದಣಿ ಕೇಂದ್ರಕ್ಕೆ ಆಗಮಿಸಿದರೆ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲು, ಚಳಿ ಎನ್ನದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಈ ವೇಳೆ ಕುಡಿಯಲು ನೀರು, ಶೌಚಗೃಹ ಇಲ್ಲ. ನೆರಳಿನ ವ್ಯವಸ್ಥೆ ಕಲ್ಪಿಸದಿರುವುದು ಬೇಸರ ಮೂಡಿಸಿದೆ ಎಂದರು.

ರೈತ ಮಾರಣ್ಣ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ಮಾಗಡಿಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಕ್ಷೇತ್ರದಲ್ಲಿನ ಸಮಸ್ಯೆ ಅರಿಯದೆ ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿಗಳ ಜತೆ ಪಕ್ಷದ ಕೆಲಸ ಮಾಡಿಕೊಂಡು ಮುಂದೆ ಸಚಿವರಾಗಲು ಕಾತುರದಿಂದ ಕುಳಿತಿದ್ದಾರೆ. ಇದು ನಾಚಿಕೆ ಗೇಡು ಎಂದರು.

ರೈತ ನಂದೀಶ್ ಮಾತನಾಡಿ, ಹೋಬಳಿ ವ್ಯಾಪ್ತಿಯ ರೈತಸಂಪರ್ಕ ಕೇಂದ್ರಗಳಲ್ಲಿ ರಾಗಿ ನೋಂದಣಿ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ. ಆದರೆ, ಅಧಿಕಾರಿಗಳು ಒಂದೆಡೆ ಮಾತ್ರ ನೋಂದಣಿ ಮಾಡುವುದರಿಂದ ಕೆಲಸ ಬಿಟ್ಟು ನೂರಾರು ರೂ. ಖರ್ಚುಮಾಡಿಕೊಂಡು ಬರಬೇಕಿದೆ. ಕೇಂದ್ರದಲ್ಲಿ ಸರ್ವರ್ ಸಮಸ್ಯೆ ಇದೆ. ಇದರಿಂದ ದಿನವಿಡೀ ಕಾದುಕುಳಿತು ಊಟ, ತಿಂಡಿ, ನೀರು ಇಲ್ಲದೆ ಪರದಾಡುವಂತಾಗಿದೆ ಎಂದು ಅಲವತ್ತುಕೊಂಡರು.

ರೈತ ಮುಖಂಡರಾದ ಹನುಮಂತರಾಜು, ಗೋಪಾಲ್, ಯೋಗೇಶ್, ಬೈರಪ್ಪ, ರಾಜಣ್ಣ, ಮುನಿಯಪ್ಪ, ಆನಂದಪ್ಪ , ನಂಜುಂಡಪ್ಪ, ಮುನಿಸ್ವಾಮಯ್ಯ, ರಂಗೇಗೌಡ, ಶಾರದಮ್ಮ, ನಂಜಮ್ಮ ಇತರರು ಇದ್ದರು.

ನೋಂದಣಿ ಕೇಂದ್ರಕ್ಕೆ ಆಗಮಿಸುವ ರೈತರಿಗೆ ಮೂಲ ಸೌಲಭ್ಯ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೋಬಳಿ ಕೇಂದ್ರದಲ್ಲಿ ನೊಂದಣಿ ಕೇಂದ್ರ ಆರಂಭಿಸುವ ಬಗ್ಗೆ ಚಿಂತಿಸಲಾಗಿದೆ. ಎಚ್.ಸಿ.ಬಾಲಕೃಷ್ಣ ಶಾಸಕ.