ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೈ.ಎಸ್.ಪಾಳ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು, ಮಣ್ಣು ಬೆರೆತ ರಾಗಿ ವಿತರಿಸಲಾಗುತ್ತಿದೆ ಎಂದು ಒಳಗೆರೆಹಳ್ಳಿ ಪಡಿತರದಾರರು ಆರೋಪಿಸಿದ್ದಾರೆ.
ಲಾಕ್ ಡೌನ್ ಸಂಕಷ್ಟಕ್ಕೆ ನೆರವಾಗಲು ಸರ್ಕಾರಗಳು ಪಡಿತರ ಕಾರ್ಡ್‌ದಾರರ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ಮತ್ತು ರಾಗಿ ವಿತರಣೆ ಮಾಡುತ್ತಿದೆ. ಅಕ್ಕಿ ಗುಣಮಟ್ಟವಿದ್ದರೂ, ಕೋಳಿಗೆ ಹಾಕುವಂತಹ ಕಳಪೆ ರಾಗಿ ವಿತರಿಸಲಾಗುತ್ತಿದೆ.
ಕರೊನಾ ಸಂದರ್ಭದಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿರುವ ಬಹುತೇಕ ಪಡಿತರ ಕಾರ್ಡ್‌ದಾರು ಸರ್ಕಾರ ನೀಡುವ ಪಡಿತರ ಆಹಾರ ಧಾನ್ಯವನ್ನೇ ಅವಲಂಬಿಸಿದ್ದಾರೆ. ಕೋಳಿಗೆ ಹಾಕುವ ಕಲ್ಲು ಮಣ್ಣು ಮಿಶ್ರಿತ ರಾಗಿಯನ್ನು ಬಡವರಿಗೆ ವಿತರಣೆ ಮಾಡಲಾಗುತ್ತಿದೆ. ಕಳಪೆ ರಾಗಿ ನೀಡುವ ಬದಲಿಗೆ, ಗೋಧಿ ಇಲ್ಲವೆ, ಅಕ್ಕಿಯನ್ನು ಹೆಚ್ಚು ನೀಡುವುದು ಉತ್ತಮ ಎಂಬುದು ಪಡಿತರದಾರರ ಅಭಿಪ್ರಾಯವಾಗಿದೆ.
ನೆಡ್ ಮೂಲಕ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿ, ಅದೇ ರಾಗಿಯನ್ನೇ ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವ ರಾಗಿಯಲ್ಲಿ ಕಲ್ಲು, ಮಣ್ಣು, ಇತರ ಧಾನ್ಯಗಳು ಸೇರಿವೆ. ಹಾಗಾದರೆ ನೆಡ್‌ನಲ್ಲಿ ಗುಣಮಟ್ಟದ ರಾಗಿ ಖರೀದಿಸದೆ ಕಳಪೆ ರಾಗಿ ಖರೀದಿಸಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ವೈ.ಎಸ್.ಪಾಳ್ಯ ನ್ಯಾಯಬೆಲೆ ಅಂಗಡಿಯಲ್ಲಿ ನಮಗೆ 20 ಕೆ.ಜಿ ರಾಗಿ ಕೊಟ್ಟಿದು, ರಾಗಿಗಿಂತ ಅದರಲ್ಲಿ ಮಣ್ಣು, ಮರಳು, ಕಲ್ಲು ಇತರ ಧಾನ್ಯಗಳು ಬೆರೆತಿವೆ. ಮಿಲ್‌ನಲ್ಲಿ ರಾಗಿ ಕ್ಲೀನ್ ಮಾಡಿಸಿದರೂ ಹೋಗದಷ್ಟು ಬೆರೆತಿವೆ. ಹಾಗಾಗಿ ಕೂಲಿನಾಲಿ ಮಾಡಿ ಜೀವನ ನಡೆಸುವ ನಮಗೆ ಈ ತಿಂಗಳು ಊಟಕ್ಕೆ ರಾಗಿ ಇಲ್ಲದಂತ್ತಾಗಿದೆ. ಅಧಿಕಾರಿಗಳು ರಾಗಿ ಬದಲಾಯಿಸಿ ಕೊಟ್ಟು ಉಪಕಾರ ಮಾಡಬೇಕಿದೆ. ರವಿ, ಒಳಗೆರೆಹಳ್ಳಿ ನಾವು ರಾಗಿ ಖರೀದಿಸಿ ತಂದು ಮಾರುವುದಿಲ್ಲ. ನ್ಯಾಯಬೆಲೆ ಅಂಗಡಿಯ ಮೂಲಕ ನೆಡ್‌ನಲ್ಲಿ ಖರೀದಿಸಿದ ರಾಗಿಯನ್ನೇ ವಿತರಿಸಲಾಗುತ್ತಿದೆ. ಲಾನುಭವಿಗಳ ಎದುರಿನಲ್ಲೇ ಚೀಲ ತೆರೆದು ನೆಲಕ್ಕೆ ಸುರಿಯದೆ ಅವರ ಚೀಲಕ್ಕೆ ಹಾಕಿ ತೂಕ ಮಾಡಿ ಕೊಡುತ್ತಿದ್ದೇವೆ. ಒಂದೊಂದು ಚೀಲಗಳಲ್ಲಿ ಮಣ್ಣು ಮಿಶ್ರಿತ ರಾಗಿ ಬರುವುದು ಸಾಮಾನ್ಯವಾಗಿದೆ. ರಿಜಾಜ್, ನ್ಯಾಯಬೆಲೆ ಅಂಗಡಿ, ವೈ.ಎಸ್.ಪಾಳ್ಯ.