ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರು ಬರೆದು, ಆಕೃತಿ ಆಶಯ ಪಬ್ಲಿಕೇಶನ್ಸ್‌ನಿಂದ ಪ್ರಕಟಿಸಿರುವ ‘ದೇವಕಿ ಬೈದ್ಯೆದಿ ಪಂಡ್‌ನ ಜನಪದ ಕತೆಕುಲು- ಸೂರ್ಯೆ ಚಂದ್ರೆ ಸಿರಿ’ ಎಂಬ ತುಳು ಕಥೆಗಳ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ಗುರುವಾರ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಅವರು ಬಿಡುಗಡೆಗೊಳಿಸಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರೊ.ಎಂ.ಎಸ್.ಕೋಟ್ಯಾನ್, ಪ್ರಗತಿಪರ ಕೃಷಿಕ ನೀಲಯ ಎಂ. ಅಗರಿ, ನಮ್ಮ ಕುಡ್ಲ ಚಾನೆಲ್‌ನ ಸುರೇಶ್ ಬಿ. ಕರ್ಕೇರ, ಕೃತಿ ರಚನೆಕಾರ ರಘುನಾಥ ಎಂ. ವರ್ಕಾಡಿ ಉಪಸ್ಥಿತರಿದ್ದರು.  
ಜಿಲ್ಲೆ

ಜನ ಸಾಮಾನ್ಯರ ಚರಿತ್ರೆ ದಾಖಲೀಕರಣ ಮುಖ್ಯ; ರಘುನಾಥ ಎಂ.ವರ್ಕಾಡಿ ಅವರ ‘ಸೂರ್ಯೆ ಚಂದ್ರೆ ಸಿರಿ’ ಕೃತಿ ಬಿಡುಗಡೆಗೊಳಿಸಿ ಡಾ.ತುಕಾರಾಮ ಪೂಜಾರಿ

ಮಂಗಳೂರು: ಶಾಸನಾಧಾರಿತ ಇತಿಹಾಸವು ಬಹುತೇಕವಾಗಿ ಆ ಅವಧಿಯ ಅರಸನ ನೇತೃತ್ವದಲ್ಲಿ ರಚಿತವಾಗಿರುತ್ತದೆ. ಆದರೆ ಪಾಡ್ದನ, ಸಂದಿ, ಗಾದೆ, ಎದುರು ಕತೆಗಳು ರೂಪದಲ್ಲಿರುವ ಜನಸಂಸ್ಕೃತಿಯ, ಜನಪದೀಯ ಮೌಖಿಕ ಸಾಹಿತ್ಯವು ಬಹುಸಂಖ್ಯಾತ ಜನಸಾಮಾನ್ಯರ ಧ್ವನಿಯಾಗಿರುವುದರಿಂದ ಇದರ ದಾಖಲೀಕರಣ ಮುಖ್ಯವಾಗಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಹೇಳಿದರು.

  • ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರು ಬರೆದು, ಆಕೃತಿ ಆಶಯ ಪಬ್ಲಿಕೇಶನ್ಸ್‌ನಿಂದ ಪ್ರಕಟಿಸಿರುವ ‘ದೇವಕಿ ಬೈದ್ಯೆದಿ ಪಂಡ್‌ನ ಜನಪದ ಕತೆಕುಲು- ಸೂರ್ಯೆ ಚಂದ್ರೆ ಸಿರಿ’ ಎಂಬ ತುಳು ಕಥೆಗಳ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
  • ನಿರ್ದಿಷ್ಟ ಕಾಲದ ಶಾಸನ, ನಾಣ್ಯಗಳು, ಸ್ಮಾರಕ ಹಾಗೂ ಲಿಖಿತ ಸಾಹಿತ್ಯವನ್ನು ಆಧರಿಸಿ ಚರಿತ್ರೆ ಬರೆಯಲಾಗುತ್ತದೆ. ಆದರೆ ಈ ನಾಲ್ಕು ಅಂಶಗಳು ಆಯಾ ಕಾಲದ ರಾಜಮಹಾರಾಜರ ಇಚ್ಚೆಯಂತೆ, ಅವರ ಕೃಪೆಗೆ ಪಾತ್ರವಾಗುವಂತೆ ರಚನೆಯಾಗಿರುತ್ತವೆ. ಇದು ಸುಮಾರು ಶೇ.90 ರಷ್ಟಿರುವ ಜನಸಾಮಾನ್ಯರ ಚರಿತ್ರೆಯಾಗುವುದು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
  • ತುಳುನಾಡಿನಲ್ಲಿ ಕೃಷಿ ಬದುಕು ನಿತ್ಯದ ಕಾಯಕವಾಗಿತ್ತು. ಆದರೆ ಇಂದು ಅದರಿಂದ ದೂರವಾಗುತ್ತಾ ಬಂದಿದ್ದೇವೆ. ಅಕ್ಕಿ, ಭತ್ತದ ಬಗೆಗಿನ ತುಳುನಾಡಿನ ನಂಬಿಕೆ, ಆರಾಧನಾ ಭಾವ ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ವಿಷಯಗಳು ಕೃತಿಗಳ ರೂಪದಲ್ಲಿ ಮೂಡಿಬಂದಾಗ ಅದು ಇತಿಹಾಸವಾಗಿ ಮುಂದಿನ ಜನಾಂಗಕ್ಕೂ ತಿಳಿಯಲ್ಪಡುತ್ತದೆ. ಆ ನಿಟ್ಟಿನಲ್ಲಿ ವರ್ಕಾಡಿ ಅವರ ಕಾರ್ಯ ಸ್ತುತ್ಯರ್ಹ. ತಮ್ಮ ತಾಯಿಯಿಂದ ಕೇಳಿ ತಿಳಿದುಕೊಂಡ ವಿಷಯಗಳನ್ನು ಪುಸ್ತಕ ರೂಪದಲ್ಲಿ ದಾಖಲೀಕರಿಸುವ ಕಾರ್ಯವನ್ನು ರಘುನಾಥ ಎಂ. ವರ್ಕಾಡಿ ಅವರು ಮಾಡಿದ್ದಾರೆ ಎಂದು ಅಭಿನಂದಿಸಿದರು.
  • ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರೊ.ಎಂ.ಎಸ್.ಕೋಟ್ಯಾನ್ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
  • ಪ್ರಗತಿಪರ ಕೃಷಿಕ ನೀಲಯ ಎಂ. ಅಗರಿ, ನಮ್ಮ ಕುಡ್ಲ ಚಾನೆಲ್‌ನ ಸುರೇಶ್ ಬಿ. ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃತಿ ರಚನೆಕಾರ ರಘುನಾಥ ಎಂ. ವರ್ಕಾಡಿ ಅವರು ಸ್ವಾಗತಿಸಿ, ವಂದಿಸಿದರು.