ಶಿರಸಿ: ಕನ್ನಡಿಗರ ಮೊದಲ ರಾಜಧಾನಿ, ಬನವಾಸಿಯ ಕದಂಬರ ಸಾಮ್ರಾಜ್ಯ, ಕಲೆ ಸಂಸ್ಕೃತಿಯನ್ನು ನಾಡಿಗೆ ತಿಳಿಸುವ ಸಲುವಾಗಿ ಹಮ್ಮಿಕೊಂಡಿರುವ ಕದಂಬೋತ್ಸವ ಮಾ.5 ಮತ್ತು 6 ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ನಡೆಯಲಿದ್ದು, ಉಪವಿಭಾಗಾಧಿಕಾರಿ ಅಪರ್ಣಾ ರಮೇಶ್ ಗುರುವಾರ ಕದಂಬೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಮಾ. 5ರಂದು ಸಾಯಂಕಾಲ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಂಬೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ಆರ್. ವಿ. ದೇಶಪಾಂಡೆ, ಸತೀಶ ಸೈಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಶಿವರಾಮ ಹೆಬ್ಬಾರ ವಸಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಎಸ್. ವಿ.ಸಂಕನೂರು, ದಿನಕರ ಸೆಟ್ಟಿ, ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ್, ಭೀಮಣ್ಣ ನಾಯ್ಕ ಹಾಗೂ ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಬಿ ಆಯಿಷಾ ಖಾನ್ ಪಾಲ್ಗೊಳ್ಳುತ್ತಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಗೆ ಶಾಸಕ ಶಿವರಾಮ ಹೆಬ್ಬಾರ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಭಕ್ತಿ ಗೀತೆ, ವಚನ ಸಂಗೀತ, ಭರತನಾಟ್ಯ, ಕಾಮಿಡಿ ಶೋ, ನೃತ್ಯ ವೈಭವ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾ. 6ರಂದು ಬೆಳಗ್ಗೆ ಕವಿಗೋಷ್ಠಿ, ಮಧ್ಯಾಹ್ನ ಇತಿಹಾಸ ಗೋಷ್ಠಿ ನಡೆಯಲಿದೆ. ಸಂಜೆ ನಡೆಯುವ ಸಮಾರೋಪದಲ್ಲಿ ಹಿರಿಯ ಸಾಹಿತಿ ಡಾ. ಝಮೀರುಲ್ಲಾ ಷರೀಫ, ಶಾಸಕ ಶಿವರಾಮ ಹೆಬ್ಬಾರ್ ಪಾಲ್ಗೊಳ್ಳುತ್ತಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮ, ರಾತ್ರಿ ಹರಿಕೃಷ್ಣ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಆಮಂತ್ರಣ ಬಿಡುಗಡೆಯ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಉಪತಹಸೀಲ್ದಾರ್ ರಮೇಶ ಹೆಗಡೆ, ಇಒ ಸತೀಶ ಹೆಗಡೆ, ಬಿ.ವಿ.ಗಣೇಶ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಕೃಷ್ಣ ಕಾಮ್ಕರ್ ಇತರರಿದ್ದರು.
ಕದಂಬಜ್ಯೋತಿ ಮೆರವಣಿಗೆ
ಸುತ್ತಮುತ್ತಲಿನ ತಾಲೂಕುಗಳಲ್ಲಿ ಕದಂಬೋತ್ಸವದ ಪ್ರಚಾರಾರ್ಥವಾಗಿ ನಡೆಸುವ ಕದಂಬ ಜ್ಯೋತಿಯ ಮೆರವಣಿಗೆ ಮಾ. 3ರಿಂದ ಗುಡ್ನಾಪುರದಿಂದ ಆರಂಭಗೊಳ್ಳಲಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಚಿವ ಮಂಕಾಳ ವೈದ್ಯ, ಶಾಸಕರಾದ ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಆರ್. ವಿ. ದೇಶಪಾಂಡೆ, ಸತೀಶ ಸೈಲ್, ಶಿವರಾಮ ಹೆಬ್ಬಾರ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಇತರರು ಭಾಗಿಯಾಗಲಿದ್ದಾರೆ. ಅದೇ ದಿನ ಗುಡ್ನಾಪುರದ ರಾಣಿ ನಿವಾಸದ ಎದುರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಮಧ್ಯಾಹ್ನ 3 ಗಂಟೆಯಿಂದ ಬನವಾಸಿಯ ಜಯಂತಿ ಪ್ರೌಢ ಶಾಲೆ ಆವರಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಬಸ್-ಸ್ಕೂಟಿ ಡಿಕ್ಕಿ ತಾಯಿ ಮಗಳು ದಾರುಣ ಸಾವು