ಗೋಕರ್ಣ:ಬಾಂಧವ್ಯ ಮತ್ತು ಸಂಬಂಧದ ಸಂರಕ್ಷಣೆಗಾಗಿ ಸಂಪತ್ತಿನ ತ್ಯಾಗವಾಗಬೇಕು.ಯಾವತ್ತೂ ಸಂಪತ್ತಿಗಾಗಿ ಸಂಬAಧ-ಬಾಂಧವ್ಯಗಳನ್ನು ವಿಮುಖವಾಗಿಸಬಾರದು.ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀಮದ್ಜಗದ್ಗುರು ಶಂಕರಾಚಾರ್ಯ,ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸೋಮವಾರ ಹೊನ್ನಾವರದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಬೆಳ್ಳಿಹಬ್ಬ ನಿಮಿತ್ತ ವಿಶೇಷವಾಗಿ ಆಯೋಜಿಸಲಾಗಿರುವ ಸರಣಿ ತಾಳಮದ್ದಳೆಯ ಮೂರನೆಯ ದಿನ, ತಾಳಮದ್ದಳೆಯಲ್ಲಿ ನಿತ್ಯ ಶ್ರೀರಾಮನ ಪಾತ್ರ ನಿರ್ವಹಿಸುವ ಹವ್ಯಕ ಮಹಾಮಂಡಲದ ಅಧ್ಯಕ್ಷ,ಸೆಲ್ಕೋ ಕಂಪನಿ ಸಿಇಒ ಮೋಹನ ಭಾಸ್ಕರ ಹೆಗಡೆ ಅವರಿಗೆ 'ಜೀವನ ಭಾಸ್ಕರ' ಬಿರುದು ಪ್ರದಾನ ಮಾಡಿ ಆಶೀರ್ವದಿಸಿದರು.
ಹಣ,ಆಸ್ತಿ ಮತ್ತು ಸಂಪತ್ತಿಗಾಗಿ ಸಂಬಂಧಕ್ಕೆ ಬೆಲೆ ನೀಡದ ದುಸ್ಥಿತಿ ನಿರ್ಮಾಣವಾಗಬಾರದು.ರಾಜ್ಯಕ್ಕಾಗಿ,ಆಸ್ತಿ ಗೋಸುಗ ಸಹೋದರರು ಕಿತ್ತಾಡಿದ್ದನ್ನು ಕಾಣುತ್ತೇವೆ.ಆದರೆ ಸಂಬಂಧ ಮತ್ತು ಬಾಂಧವ್ಯಗಳ ಚರಮ ಸೀಮೆಗೆ ಸಾಕ್ಷಿಯಾಗಿ ರಾಮ ಮತ್ತು ಭರತರು ಸರ್ವಕಾಲೀನ ಉದಾಹರಣೆಯಾಗಿದ್ದಾರೆ.ವನವಾಸದ ವೇಳೆಯಲ್ಲಿನ ಈ ಸಹೋದರರ ಸಮ್ಮಿಲನದ ಅಪ್ಪುಗೆಯಲ್ಲಿ ಸಂಬಂಧ-ಬಾಂಧವ್ಯಗಳು ಪ್ರೇಮದ ನದಿಯಾದವು.ಈ ಅಮೋಘ ಪ್ರೇಮಮಯ ಭಾವಗಳನ್ನು ಭಾಷೆಯ ವಿಲಾಸದಿಂದ, ಶ್ರೀರಾಮನ ಪಾತ್ರ ನಿರ್ವಹಣೆಯ ಮೂಲಕ ಸಮಾಜದಲ್ಲಿ ಮೌಲ್ಯ ವರ್ಧನೆಗೆ ಮೋಹನ ಹೆಗಡೆ ಅವರು ಕಾರಣರಾಗಿದ್ದಾರೆ.ತಾಳಮದ್ದಳೆ ಮಾಧ್ಯಮದಿಂದ ಸಂಸ್ಕಾರ ಸಂವರ್ಧನೆಯ ಮಹತ್ಕಾರ್ಯ ಕೈಗೊಳ್ಳುತ್ತಿರುವ ನಾಟ್ಯಶ್ರೀ ಸತ್ಕಾರ್ಯದ ಕೀರ್ತಿಗೆ ಭಾಜನವಾಗಿದೆ ಎಂದು ಶ್ರೀಗಳು ಆಶೀರ್ವದಿಸಿದರು.
ಸನ್ಮಾನ ಮತ್ತು ಬಿರುದು ಸ್ವೀಕರಿಸಿ ಮಾತನಾಡಿದ ಮೋಹನ ಹೆಗಡೆ ಶ್ರೀಗಳ ಆಶೀರ್ವಾದ,ಸ್ನೇಹಿತರ ಹಾರೈಕೆ ಮತ್ತು ದೇವರ ಒತ್ತಾಸೆ ನಾನು ಮಾಡುತ್ತಿರುವ ಸರ್ವ ಸತ್ಕಾರ್ಯಗಳಿಗೆ ಬಲವಾಗಿದೆ ಎಂದರು. ನಾಟ್ಯಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಸ್.ಶಂಭು ಭಟ್ಟ ಕಡತೋಕ ಫಲ ಸಮರ್ಪಿಸಿದರು.ಅಧ್ಯಕ್ಷ ಎಸ್.ಜಿ.ಭಟ್ಟ ಕಬ್ಬಿನಗದ್ದೆ ಸನ್ಮಾನ ಪತ್ರ ವಾಚಿಸಿದರು.ರಾಘವೇಂದ್ರ ಮಧ್ಯಸ್ಥ ನಿರ್ವಹಿಸಿದರು.ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ವಂದಿಸಿದರು.ಕಾರ್ಯಕ್ರಮದಲ್ಲಿ ಯಕ್ಷನೃತ್ಯ ಮೂಲಕ ವಿಶ್ವ ದಾಖಲೆ ಗೈದ ಕು.ತುಳಸಿ ಹೆಗಡೆ ಅವಳನ್ನು ಶ್ರೀಗಳು ಪ್ರತಿಷ್ಠಾನದ ವತಿಯಿಂದ ರಜತ ಪುರಸ್ಕಾರವಿತ್ತು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮಾತೋಶ್ರೀ ಪಾರ್ವತಿ ಭಾಸ್ಕರ ಹೆಗಡೆ,ವಿನಾಯಕ ಹೆಗಡೆ ಕಲಗದ್ದೆ,ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗಾ,ರಾಘವೇಂದ್ರ ಮಯ್ಯ,ಪ್ರಸನ್ನ ಹೆಗಡೆ,ಸುಬ್ರಾಯ ಭಟ್ಟ ಮೂರೂರು,ಐರೋಡಿ ರಾಜಶೇಖರ ಹೆಬ್ಬಾರ,ಉಷಾ ಮೋಹನ ಹೆಗಡೆ ಮತ್ತಿತರರಿದ್ದರು.ಇದಕ್ಕೂ ಮುನ್ನ ಚಿತ್ರಕೂಟ ತಾಳಮದ್ದಳೆ ನಡೆಯಿತು.
ಇಂದು ಕೋಣಾರೆಯಲ್ಲಿ:ಜು.9 ರಂದು ಸಂಜೆ 5 ಗಂಟೆಗೆ ಮೂರೂರು ಕೋಣಾರೆ ಮಹಾವಿಷ್ಣು ಮಂದಿರದಲ್ಲಿ ಪಂಚವಟಿ ತಾಳಮದ್ದಳೆ ನಡೆಯಲಿದೆ.