ಜಿಲ್ಲೆ

ಶಿರೂರು ಗುಡ್ಡ ಕುಸಿತ ಸ್ಥಳ ವೀಕ್ಷಿಸಿದ ರಾಘವೇಶ್ವರ ಶ್ರೀ

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಬುಧವಾರ 31ನೇ ಅನಾವರಣ ಚಾತುರ್ಮಾಸ್ಯ ಮಂಗಳಾಚರಣೆ ನಿಮಿತ್ತ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಮೇಲಿನ ಶಿರೂರು ಗ್ರಾಮದಲ್ಲಿ ಹರಿಯುತ್ತಿರುವ ಗಂಗಾವಳಿ ನದಿ ದಾಟುವ ಮೂಲಕ ಸೀಮೋಲ್ಲಂಘನ ಕೈಗೊಂಡರು.

ಇದೇ ಸಂದರ್ಭದಲ್ಲಿ ಶ್ರೀಗಳು ಶಿಷ್ಯ ಭಕ್ತರೊಂದಿಗೆ ಎರಡು ತಿಂಗಳ ಹಿಂದೆ ಶಿರೂರಿನಲ್ಲಿ ಬೃಹತ್ ಗುಡ್ಡ ಕುಸಿದು ಸಂಭವಿಸಿದ ಘಟನಾ ಸ್ಥಳವನ್ನು ಕೂಡ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಕೃತಿ ಮುನಿದರೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಶಿರೂರು ಆಕಸ್ಮಿಕ ಘಟನೆ ಸಾಕ್ಷಿ. ಪರ್ವತವೊಂದರ ದೊಡ್ಡ ಭಾಗವೇ ಕುಸಿದು ಬಂದು ನದಿಗೆ ಬಿದ್ದು ಒಂದು ದ್ವೀಪವನ್ನೇ ನಿರ್ಮಾಣ ಮಾಡಿರುವುದು ನಿಸರ್ಗದ ಅಗಾಧ ಶಕ್ತಿಗೆ ನಿದರ್ಶನ. ಈ ದುರಂತದಲ್ಲಿ ತೊಂದರೆಗೊಳಗಾದ ಅಮಾಯಕರು ಮತ್ತು ಸಂತ್ರಸ್ತ ಕುಟುಂಬಗಳ ಬಗ್ಗೆ ನಮ್ಮ ತೀವ್ರ ಸಂತಾಪವಿದೆ. ಶ್ರೀಮಠದ ವತಿಯಿಂದ ಈಗಾಗಲೇ ಈ ಕುಟುಂಬಗಳಿಗೆ ಸಾಧ್ಯವಾದಷ್ಟು ಸಹಾಯ ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಮುಂದೆಯೂ ಸಂತ್ರಸ್ತರ ನೆರವಿಗೆ ಶ್ರೀಮಠ ಬರಲಿದೆ ಎಂದರು.

ಚಾತುರ್ಮಾಸ್ಯ ಸೇವಾ ಸಮಿತಿಯ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಬಿಜೆಪಿ ಜಿಲ್ಲಾ ಹಿಂದುಳಿದ ಘಟಕದ ಖಜಾಂಚಿ ಮಹೇಶ ಶೆಟ್ಟಿ, ಜೆಡಿಎಸ್ ಪ್ರಮುಖ ಸೂರಜ ನಾಯ್ಕ ಸೋನಿ, ಜಿಲ್ಲಾ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ, ಸ್ಥಳೀಯ ಪಹರೆ ವೇದಿಕೆ ಅಧ್ಯಕ್ಷ ನಾಗೇಶ ಗೌಡ, ಶಂಕರ ಗೌಡ ಹೆಗ್ರೆ ಮತ್ತು ಶಿಷ್ಯಭಕ್ತರಿದ್ದರು.