ಗೋಕರ್ಣ: ಶ್ರೀರಾಮಚಂದ್ರಾಪುರ ಮಠ ಮತ್ತು ಹಾಲಕ್ಕಿ ಒಕ್ಕಲಿಗ ಸಮಾಜದ ಮಧ್ಯೆ ಪರಂಪರಾಗತ ಬಾಂಧವ್ಯದ ಬೆಸುಗೆಯಿದೆ. ಅನಾದಿಯಿಂದ ಶ್ರೀಮಠದ ಸೇವೆಗೆ ಬದ್ಧರಾಗಿರುವ ಹಾಲಕ್ಕಿಗಳು ಶ್ರೀಮಠದ ಅತಿ ಪುರಾತನ ಶಿಷ್ಯರಾಗಿದ್ದಾರೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ವಸ್ಯ ನಿಮಿತ್ತ ಹಾಲಕ್ಕಿ ಸಮಾಜದಿಂದ ಪಾದಪೂಜೆ ಸ್ವೀಕರಿಸಿ ಸಮಾಜದ ಮುಖಂಡರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ಹಾಲಕ್ಕಿ ಸಮಾಜದ ಏಳಿಗೆಗೆ ಶ್ರೀಮಠ ಯಾವತ್ತೂ ಬೆಂಬಲವಾಗಿ ನಿಲ್ಲಲಿದೆ. ಹಾಲಕ್ಕಿ ಪ್ರತಿಭಾವಂತ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಶ್ರೀಮಠ ಪ್ರತ್ಯೇಕ ಗುರುಕುಲ ಸ್ಥಾಪನೆಗೆ ಬದ್ಧವಾಗಿದೆ. ಈ ಸಮಾಜದ ಪ್ರಮುಖ ಮುಖಂಡರು ಜತೆ ಸೇರಿ ಈ ಬಗ್ಗೆ ಸಮಾಲೋಚಿಸಿ ಅಗತ್ಯ ರೂಪುರೇಷೆ ಸಿದ್ಧಪಡಿಸುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಲಕ್ಕಿ ಸಮಾಜದ ಪ್ರಮುಖರಾದ ಹಾಲಕ್ಕಿ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಗೋವಿಂದ ನಾಗಪ್ಪ ಗೌಡ, ಮಂಜುನಾಥ ಗೌಡ ಕೆಕ್ಕಾರು, ಹಾಲಕ್ಕಿ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಬೆಳಂಬರ, ಮಂಕಾಳು ಗೌಡ ನುಶೀಕೋಟೆ ಅವರನ್ನು ಶ್ರೀಗಳು ಸನ್ಮಾನಿಸಿದರು.
ಹಾಲಕ್ಕಿ ಸಮಾಜದ ನಿವೃತ್ತ ಶಿಕ್ಷಕ ಬಿ.ಎಸ್. ಗೌಡ, ಗುರುಗೌಡರಾದ ರಮೇಶ ಗೌಡ ಕಾರವಾರ, ಆನಂದ ಗೌಡ ಹುಳ್ಸೇಕೇರಿ, ಪ್ರಕಾಶ ಗೌಡ ಬಿಜ್ಜೂರು, ಶಂಕರ ಗೌಡ ಹೆಗ್ರೆ ಮತ್ತಿತರರ ನೇತೃತ್ವದಲ್ಲಿ ಆಯೋಜಿತವಾದ ಶ್ರೀಗಳ ಪಾದಪೂಜೆಯಲ್ಲಿ 200ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.