ಗೊಳಸಂಗಿ: ಸಂಘದ ಸದಸ್ಯರಿಗೆ ಇದುವರೆಗೂ ನೀಡಲಾಗುತ್ತಿದ್ದ ಡಿವಿಡೆಂಟ್ ಹಣವನ್ನು ಶೇ.8 ರಿಂದ 12ಕ್ಕೆ ಪ್ರಸಕ್ತ ವರ್ಷದಿಂದ ಏರಿಕೆ ಮಾಡಲಾಗುವುದು ಎಂದು ಎಂಪಿಆರ್‌ಎಸಿಎಸ್ ಕಾರ್ಯದರ್ಶಿ ರಾಘವೇಂದ್ರಸ್ವಾಮಿ ದೇವಾಂಗಮಠ ಹೇಳಿದರು.
ಸ್ಥಳೀಯ ವಿಠ್ಠಲ- ರುಕ್ಮಿಣಿ ಮಂದಿರದಲ್ಲಿ ಸೋಮವಾರ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ (ಎಂಪಿಆರ್‌ಎಸಿಎಸ್) ದ 76ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಂಘ ಎಲ್ಲ ಖರ್ಚು ವೆಚ್ಚಗಳನ್ನು ಸರಿದೂಗಿಸಿ 59,21,084 ರೂ. ಲಾಭಾಂಶ ಹೊಂದಿದೆ. ರೈತರ ಬೆಳೆಸಾಲ 18 ಲಕ್ಷ ರೂ. ಹಾಗೂ ಒಡಿ ಮತ್ತು ಬಿನ್ ಸೇತಗಿರಿ ಸೇರಿ 28 ಲಕ್ಷ ರೂ. ಸಾಲ ಕಟಬಾಕಿಯಾಗಿದೆ. ಅವರೆಲ್ಲರ ಮನವೊಲಿಸಿ ಮುಂಬರುವ ದಿನಗಳಲ್ಲಿ ಋಣಮುಕ್ತರನ್ನಾಗಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ ಮಾತನಾಡಿ, ಪ್ರಸ್ತುತ ರೈತರಿಗೆ ನೀಡಲಾಗುತ್ತಿದ್ದ ಶೂನ್ಯ ಬಡ್ಡಿ ದರದ 3 ಲಕ್ಷ ರೂ. ಸಾಲವನ್ನು 5 ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ. ಜತೆಗೆ ಟ್ಯಾಕ್ಟರ್ ಖರೀದಿಗೆ ನೀಡಲಾಗುತ್ತಿದ್ದ 12 ಲಕ್ಷ ರೂ. ಸಾಲವನ್ನು 15 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಮಹಿಬೂಬಸಾಬ ಹತ್ತರಕಿಹಾಳ, ಉಪಾಧ್ಯಕ್ಷ ಕುಮಾರಗೌಡ ಪಾಟೀಲ ಮಾತನಾಡಿದರು. ರೈತ ಮುಖಂಡರಾದ ಅಶೋಕ ಗುಡದಿನ್ನಿ, ದೇವೇಂದ್ರ ಬಳಮಕರ, ಮಳಿಯಪ್ಪ ಹಂಗರಗಿ, ಅಬ್ಬಾಸಲಿ ಡೋಲಚಿ ರೈತರ ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು.
ವೇ.ಗುರುಲಿಂಗಯ್ಯಸ್ವಾಮಿ ಪಾರ್ವತಿಮಠ, ತಜಮುಲಖಾದ್ರಿಸಾಹೇಬ ಜಾಗೀರದಾರ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕಿ ರಾಜೇಶ್ವರಿ ಹೆಬ್ಬಾಳ, ಸಂಘದ ನಿರ್ದೇಶಕರಾದ ಶಿವಾನಂದ ಗೋಣಿ, ಚನ್ನಮಲ್ಲ ಉಳ್ಳಿ, ನಾರಾಯಣ ಕಿರಗತ, ವಿರುಪಾಕ್ಷಪ್ಪ ಕಿಣಗಿ, ಹನುಮಂತ ಇಟಗಿ, ಶೇಕು ರಾಠೋಡ, ಕಸ್ತೂರೆವ್ವ ತೆಗ್ಗಿ, ಶೋಭಾ ಬೀರಲದಿನ್ನಿ ಇತರರಿದ್ದರು.
ಕಳೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸೃಷ್ಟಿ ಮೇಲಿನಮನಿ, ಸೃಷ್ಟಿ ಉಳ್ಳಿ, ಆಕಾಶ ಮಸಬಿನಾಳ, ಉಸ್ಮಾನ ಮುಕಾರ್ತಿಹಾಳ, ಸಂಗನಗೌಡ ಬಿರಾದಾರ, ಸೌಜನ್ಯ ಉಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಭೆಯ ಆರಂಭಕ್ಕೂ ಮುನ್ನ ಲಿಂ. ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರಿಗಳು ಹಾಗೂ ನಿಧನರಾದ ಸಂಘದ ಸದಸ್ಯರಿಗೆ ಶೋಕ ವ್ಯಕ್ತಪಡಿಸಲಾಯಿತು.