ಹುಣಸೂರು ನಗರದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಮೊದಲ ದಿನವಾದ ಪೂರ್ವಾರಾಧನೆ ದಿನದ ಅಂಗವಾಗಿ ರಾಯರ ಪೀಠವು ಹೂವಿನ ಅಲಂಕಾರದಿಂದ ಕಂಗೊಳಿಸಿತು. 
ಜಿಲ್ಲೆ

ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವಕ್ಕೆ ಚಾಲನೆ

ಹುಣಸೂರು: ನಗರದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರುಸಾರ್ವಭೌಮ ರಾಘವೇಂದ್ರಸ್ವಾಮಿಗಳ 354ನೇ ಆರಾಧನಾ ಮಹೋತ್ಸವವು ಶ್ರದ್ಧಾಭಕ್ತಿಗಳಿಂದ ಆರಂಭಗೊಂಡಿತು.

ಭಾನುವಾರದಿಂದ ಆರಾಧನಾ ಮಹೋತ್ಸವವು ಮೂರು ದಿನಗಳ ಕಾಲ ನಡೆಯಲಿದ್ದು, ಮೊದಲ ದಿನವಾದ ಪೂರ್ವಾರಾಧನಾ ಕಾರ್ಯಕ್ರಮಗಳು ಭಾನುವಾರ ಬೆಳಗ್ಗೆ ಸುಪ್ರಭಾತದೊಂದಿಗೆ ಆರಂಭವಾದವು.

ಅರ್ಚಕ ನಾರಾಯಣಮೂರ್ತಿ ಮತ್ತವರ ತಂಡ ರಾಯರ ಸನ್ನಿಧಿಯಲ್ಲಿ ಉಷಾ ಕಾಲ ಪೂಜೆ, ಪಂಚಾಮೃತ ಅಭಿಷೇಕಗಳು, ವಾಯುಸ್ತುತಿ, ಪುನಶ್ಚರಣ ಅಭಿಷೇಕ, ಅಲಂಕಾರ, ಅಷ್ಟೋತ್ತರ, ಪಾದಪೂಜೆ, ಹಸ್ತೋದಕದ ನಂತರ ಮಹಾಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿನಿಯೋಗಿಸಿದರು. ನೆರೆದ ನೂರಾರು ಭಕ್ತರು ರಾಯರ ಪೀಠದ ಹೂವಿನ ಅಲಂಕಾರ, ಅಭಿಷೇಕ ಪೂಜಾಕೈಂಕರ್ಯಗಳನ್ನು ಕಣ್ತುಂಬಿಕೊಂಡು ಧನ್ಯತೆ ಅನುಭವಿಸಿದರು.

ಶ್ರೀಮಠ ಆಡಳಿತ ಮಂಡಳಿಯ ಸತೀಶ್ ಮಾತನಾಡಿ, ಉಡುಪಿ ಅದೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಆದೇಶ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ರಾಯರ 314ನೇ ಆರಾಧನಾ ಮಹೋತ್ಸವ ಧಾರ್ಮಿಕ ಕೈಂಕರ್ಯಗಳ ಮೂಲಕ ಆಯೋಜಿಸಿದ್ದು, ತಾಲೂಕಿನ ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ತನು, ಮನ, ಸ್ವಹಸ್ತ, ಪರಹಸ್ತಗಳಿಂದ ಧನ, ಧಾನ್ಯಾದಿ ರೂಪಗಳಲ್ಲಿ ಸೇವೆ ಸಲ್ಲಿಸಿದ್ದು, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಕಾರ್ಯಕ್ರಮಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿ, ರಾಯರ ಭಕ್ತರ ಸಹಕಾರವೇ ನಮ್ಮ ಶ್ರೀರಕ್ಷೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.