ಹರ್ಷ ನ. ಪುರೋಹಿತ ದಾವಣಗೆರೆ
ಜನರ ಕಷ್ಟಗಳ ನಿವಾರಣೆ ಮತ್ತು ಲೋಕೋದ್ಧಾರಕ್ಕಾಗಿ ಅವತರಿಸಿದವರೇ ಶ್ರೀ ರಾಘವೇಂದ್ರ ಸ್ವಾಮಿಗಳು. ನಂಬಿದ ಭಕ್ತರನ್ನು ರಾಯರು ಎಂದೂ ಕೈ ಬಿಡುವುದಿಲ್ಲ.
ಹಾಗೆಯೇ ದೃಢ ಭಕ್ತಿಯಿಂದ ಯಾರು ರಾಯರನ್ನು ಬೇಡುತ್ತಾರೋ ಅಂತಹವರ ಜೀವನದಲ್ಲಿ ರಾಯರು ಪವಾಡಗಳನ್ನು ಸೃಷ್ಟಿಸುತ್ತಾರೆ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬಂತೆ ಪ್ರತಿಯೊಬ್ಬರ ಬದುಕಿನಲ್ಲಿ ಒಬ್ಬ ಗುರುವಿನ ಮಾರ್ಗದರ್ಶನ ಅತ್ಯಗತ್ಯ.
ಅಂತಹ ಗುರು ಶ್ರೇಷ್ಠರಲ್ಲಿ ಗುರು ಎಂದೇ ಪ್ರಸಿದ್ಧಿ ಪಡೆದವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು. ಅವರ ಪವಾಡಗಳ ಬಗ್ಗೆ ಹೇಳುತ್ತಾ ಹೋದರೆ ಮೈ ರೋಮಾಂಚನವಾಗುತ್ತದೆ.
ಹಾಗಾಗಿ ಪ್ರತಿ ಊರಿನಲ್ಲಿ ರಾಯರ ಮಠ ಇದ್ದೇ ಇರುತ್ತದೆ. ಅದರಂತೆ ದಾವಣಗೆರೆ ನಗರದ ಕೆ.ಬಿ. ಬಡಾವಣೆಯಲ್ಲಿ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿದ್ದಾರೆ ಶ್ರೀ ರಾಘವೇಂದ್ರ ತೀರ್ಥರು.
ಮಠದ ಉಗಮ
ಭಕ್ತರು 1960ರಲ್ಲಿ ರಾಯರ ಬೃಂದಾವನ ಇಟ್ಟುಕೊಂಡು ಈ ಪ್ರದೇಶದಲ್ಲಿ ಭಜನೆ ಮಾಡುತ್ತಿದ್ದರು.
ಮಠದ ಸಂಸ್ಥಾಪಕ ಅಧ್ಯಕ್ಷ ನಿವೃತ್ತ ಜಡ್ಜ್ ಎನ್.ಎಸ್. ಜಯರಾವ್ ಅವರ ಧ್ಯೇಯ ಹಾಗೂ ಮೂಲ ಅರ್ಚಕರಾದ ಚನ್ನಗಿರಿ ರಾಮಾಚಾರ್ ಅವರ ತಪಸ್ಸಿನ ಫಲವಾಗಿ ಮಠ ತಲೆ ಎತ್ತಿ ನಿಲ್ಲಲು ಕಾರಣವಾಯಿತು.
1976ರಲ್ಲಿ ನೂತನ ಕಟ್ಟಡ ನಿರ್ಮಾಣವಾಯಿತು. ಮಂತ್ರಾಲಯದ ಶ್ರೀ ಸುಜಯೀಂದ್ರತೀರ್ಥ ಸ್ವಾಮೀಜಿ ಬೃಂದಾವನ ಪ್ರತಿಷ್ಠಾಪನೆ ಮಾಡಿದರು.
ನಂತರ 1990 ರಲ್ಲಿ ಮಂತ್ರಾಲಯ ಮಠಾಧೀಶರಾದ ಸುಶಮೀಂದ್ರ ತೀರ್ಥರು ವೃಂದಾವನದ ಹಿಂಭಾಗದಲ್ಲಿ ಶ್ರೀ ಕೃಷ್ಣ ಹಾಗೂ ಮಧ್ವಾಚಾರ್ಯರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರು.
ಪ್ರತಿದಿನ ಬೆಳಗ್ಗೆ ನಿರ್ಮಾಲ್ಯ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ, ಹಸ್ತೋದಕ, ಸಂಜೆ ಮಂಗಳಾರತಿ ನಡೆಯುತ್ತದೆ.
ಇದಲ್ಲದೆ ಪ್ರತಿ ಗುರುವಾರ ಸಂಜೆ ರಥೋತ್ಸವ, ಉಪನ್ಯಾಸ, ಪ್ರವಚನ, ಅಷ್ಟಾವಧಾನ, ಮಹಾ ಮಂಗಳಾರತಿ ನಡೆಯುತ್ತದೆ.
ವಿಶೇಷ ಉತ್ಸವ
ಪ್ರತಿ ವರ್ಷ ಶ್ರಾವಣ ಕೃಷ್ಣ ಪಾಡ್ಯದಿಂದ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಧಾನ್ಯಪೂಜೆ, ಗೋಪೂಜೆ, ಲಕ್ಷ್ಮೀ ಪೂಜೆ ಹಾಗೂ ಧ್ವಜಾರೋಹಣದಿಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತದೆ.
ಅಷ್ಟೋತ್ತರ ಪಾರಾಯಣ, ಪುಷ್ಪಾಲಂಕಾರ, ತುಲಸಿ ಅರ್ಚನೆ ನಡೆದರೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮಹಾರಥೋತ್ಸವ
ಕೊನೆಯ ದಿನ ರಥಬೀದಿಯಲ್ಲಿ ಮಹಾರಥೋತ್ಸವ ನಡೆಯುತ್ತದೆ.
ಮಠದ ಪರಂಪರೆಯ ಗುರುಗಳ ಆರಾಧನೆ ಹಾಗೂ ಕಡೇ ಕಾರ್ತಿಕೋತ್ಸವವನ್ನು ಸಹ ಮಠದಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತದೆ.
ಸಮೀಪದ ಭರಮಸಾಗರದಿಂದ ಹಿಡಿದು, ಶಿವಮೊಗ್ಗ, ದೂರದ ಬೆಂಗಳೂರಿನಿಂದ ಸಹ ಭಕ್ತರು ಬಂದು ರಾಯರಿಗೆ ಸೇವೆ ಸಲ್ಲಿಸುತ್ತಾರೆ.
ಶ್ರೀ ಗುರುರಾಜ ಸೇವಾ ಸಂಘದ ಉಸ್ತುವಾರಿ
ಶ್ರೀ ಗುರುರಾಜ ಸೇವಾ ಸಂಘದ ಉಸ್ತುವಾರಿಯಲ್ಲಿ ಮಠದ ಆಡಳಿತ ನಡೆಯುತ್ತಿದೆ.
ಮಠದಲ್ಲಿ ವಿಶಾಲ ಪ್ರಾಂಗಣವಿದ್ದು, ವಿಶೇಷ ಧಾರ್ಮಿಕ ಕಾರ್ಯಗಳು, ಉಪನ್ಯಾಸ, ಪ್ರವಚನಕ್ಕೆ ಅನುಕೂಲವಾಗುವಂತೆ ವಿಶಾಲವಾದ ಜಾಗೆ ಇದೆ.
ಅಧ್ಯಕ್ಷ ಕೆ.ಎಸ್. ಪ್ರಸನ್ನಕುಮಾರ ನೇತೃತ್ವದಲ್ಲಿ ಕಾರ್ಯದರ್ಶಿ ಎನ್.ಎಸ್.ರಾವ್, ಖಜಾಂಚಿ ವಾಗೀಶಾಚಾರ್ಯ, ಸದಸ್ಯರಾದ ಕಡೂರು ಪ್ರಹ್ಲಾದರಾವ್, ಸಿ.ಕೆ. ಆನಂದ ತೀರ್ಥಾಚಾರ್, ನರಗನಹಳ್ಳಿ ಕುಟುಂಬಸ್ಥರು ಮತ್ತಿತರರು ಮಠದ ಧಾರ್ಮಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ವಾಚಸ್ಪತಿ ಮಠದಲ್ಲಿ ನಡೆಯುವ ಸೇವಾಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಕಾರ್ಯದಲ್ಲೂ ಮುಂದೆ
ಮಠ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜಕ್ಕೆ ಸಂಕಷ್ಟ ಬಂದೊದಗಿದಾಗ ನೆರವಿಗೆ ನಿಂತಿದೆ. ಇದಕ್ಕೆ ಕೋವಿಡ್ ಅವಧಿ ಸಾಕ್ಷಿ.
ಕೋವಿಡ್ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಮೂರು ತಿಂಗಳ ಕಾಲ ಪ್ರತಿದಿನವೂ ಸುಮಾರು 800 ಜನರಿಗೆ ಉಪಾಹಾರದ ಪೊಟ್ಟಣಗಳನ್ನು ವಿತರಿಸಿ ಸಾಮಾಜಿಕ ಕಳಕಳಿ ತೋರಿದೆ.
ಗುರುರಾಯರ ಭಕ್ತಿ, ಸೇವೆಗೆ ನಮ್ಮ ಮೊದಲ ಆದ್ಯತೆ. ಇದಕ್ಕೆ ಅನುಕೂಲ ಕಲ್ಪಿಸಲು ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವ ಗುರಿ ಇದೆ. ಧಾರ್ಮಿಕದ ಜತೆಗೆ ಸಾಮಾಜಿಕ ಸೇವೆ, ಸಮಾಜದಲ್ಲಿನ ಬಡಜನರಿಗೆ ನೆರವು ನೀಡುವ ಉದ್ದೇಶವಿದೆ. ಮೆಡಿಕಲ್ ಕ್ಯಾಂಪ್, ಧಾರ್ಮಿಕ ಶಿಬಿರ ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ಸಂಸ್ಕೃತ ಪಾಠಗಳನ್ನು ಕೇಳಿಕೊಡಲಾಗುತ್ತಿದೆ. ಸಮಾಜದ ಮಕ್ಕಳಿಗೆ ನೆಟ್, ಸಿಇಟಿ ತರಬೇತಿ ನೀಡುವ ಗುರಿ ಇಟ್ಟುಕೊಂಡಿದ್ದೇವೆ.ಕೆ.ಎಸ್. ಪ್ರಸನ್ನಕುಮಾರ, ಅಧ್ಯಕ್ಷರು, ಶ್ರೀ ಗುರುರಾಜ ಸೇವಾ ಸಂಘ.