RAGHAVENDRA HITNAl 
ಜಿಲ್ಲೆ

ಸಿಂಗಟಾಲೂರು ಏತ ನೀರಾವರಿಗೆ ಮರು ಜೀವ

Kopala - Raveendra V K

ಕೊಪ್ಪಳ: ಬಹುದಿನದಿಂದ ನನೆಗುದಿಗೆ ಬಿದ್ದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಧ್ಯ ಪ್ರದೇಶ ಮಾದರಿಯಲ್ಲಿ ಮುಂದುವರಿಸಲು ಸರ್ಕಾರ ಅನುಮೋದನೆ ನೀಡಿದೆ. ಒಟ್ಟು ೫೫೪ ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದು, ಕೊಪ್ಪಳ ಭಾಗದ ಕಾಮಗಾರಿಗೆ ಮೊದಲ ಹಂತದಲ್ಲಿ ೧೩೮.೩೫ ಕೋಟಿ ರೂ. ಬಿಡುಗಡೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಮುದ್ರೆ ಒಪ್ಪಿದೆ.

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ನೀರಾವರಿ ನಿಗಮದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರಸ್ತಾಪಿಸಿದ್ದಾರೆ. ೫೫೪ ಕೋಟಿ ರೂ. ಅನುದಾನ ಅವಶ್ಯವಿದ್ದು, ನೀಡುವಂತೆ ಒತ್ತಾಯಿಸಿದರು. ನೀರಾವರಿ ಸೌಲಭ್ಯ ಕಲ್ಪಿಸುವುದರಿಂದ ಈ ಭಾಗದ ರೈತರಿಗೆ ಅನುಕೂಲೊವಾಗಲಿದೆ. ಎರಡು ದಶಕದಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ರೈತರು ಪರಿತಪಿಸುತ್ತಿದ್ದಾರೆಂದು ವಿವರಿಸಿದರು.

ಇದಕ್ಕೆ ಅನುಮೋದನೆ ನೀಡಿದ ಸಿಎಂ ಯೋಜನೆಗೆ ಮೊದಲ ಹಂತದಲ್ಲಿ ಮುಂಡರಗಿ ಶಾಖಾ ವ್ಯಾಪ್ತಿಯ ಕೊಪ್ಪಳ ತಾಲೂಕಿನ ವಿವಿಧ ಕಾಮಗಾರಿಗಳಿಗೆ ೧೩೮.೩೫ ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದರು. ೨೦೨೪-೨೫ನೇ ಸಾಲಿನಲ್ಲಿ ಪ್ಯಾಕೇಜ್ ೬ರಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ ೯ರಿಂದ ೧೨ ರವರೆಗಿನ ೮,೫೮೨ ಹೆಕ್ಟೇರ್ ಜಮೀನಿಗೆ ಮಧ್ಯಪ್ರದೇಶ ವಾದರಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

ಕಾಮಗಾರಿಯ ೩೦೧ ಕೋಟಿ ಮೊತ್ತದಲ್ಲಿ ಪ್ರಸಕ್ತ ವರ್ಷ ಯೋಜನೆಗೆ ೭೫.೩೧ ಕೋಟಿ ಅನುದಾನ ಬಿಡುಗಡೆ ಹಾಗೂ ಪ್ಯಾಕೇಜ್ ನಂ೭ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ ೧೩ ರಿಂದ ೧೬ರ ವರೆಗಿನ ೭,೯೪೧ ಹೆಕ್ಟೇರ್ ಭೂ ಪ್ರದೇಶಕ್ಕೂ ಸಹ ಮಧ್ಯಪ್ರದೇಶ ವಾದರಿಯ ನೀರಾವರಿ ಕಲ್ಪಿಸುವ ಕಾಮಗಾರಿಯ ೨೫೨ ಕೋಟಿ ಮೊತ್ತದಲ್ಲಿ ೬೩.೦೪ ಕೋಟಿ ಅನುದಾನ ನೀಡಲಾಗುವುದು. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.