ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಿಇಟಿ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿದರು. ನಿರ್ದೇಶಕ, ಮಾಜಿ ಶಾಸಕ ರಾಜಶೇಖರ ಶೀಲವಂತ, ಸದಸ್ಯರಾದ ವಿಠ್ಠಲಸಾ ಕಾವಡೆ, ಬಾಲಮುಕುಂದ ತಾಪಡಿಯಾ, ವಿಶ್ವನಾಥ ಅಂಗಡಿ, ಅಶೋಕ ಹೆಗಡೆ, ಎಸ್.ಎಸ್. ನಾಯನೇಗಲಿ, ಪ್ರಾಚಾರ್ಯ ಎನ್.ವೈ.ಬಡನ್ನವರ ಇದ್ದರು. 
ಜಿಲ್ಲೆ

ನಮ್ಮ ಕಾಲೇಜಿನಲ್ಲಿ ರ‌್ಯಾಗಿಂಗ್‌ಗೆ ಅವಕಾಶ ನೀಡಿಲ್ಲ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ನಮ್ಮ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದಲ್ಲಿ ಬಿ.ಎ ಅಂತಿಮ ವರ್ಗದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಅಂಜಲಿ ಮುಂಡಾಸ ಆತ್ಮಹತ್ಯೆ ಮಾಡಿಕೊಂಡ ವಿಷಯ ತಡರಾತ್ರಿ ಗಮನಕ್ಕೆ ಬಂದಿದೆ ಎಂದು ಪಿ.ಟಿ.ಟ್ರಸ್ಟ್ ಗೌರವಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.

ಕಾಲೇಜಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಬೆಳಗ್ಗೆ ಎರಡನೇ ಹಾಗೂ ಮೂರನೇ ಅವಧಿ ವರ್ಗಗಳಿಗೆ ವಿದ್ಯಾರ್ಥಿನಿ ಹಾಜರಾಗಿದ್ದಾಳೆ. ಬೆಳಗ್ಗೆ 11 ಗಂಟೆಯಿಂದ 11. 20 ಗಂಟೆ ವಿಶ್ರಾಂತಿಯ ಅವಧಿಯಲ್ಲಿ ಅವಳ ವರ್ಗದ ಸಹಪಾಠಿಗಳೊಂದಿಗೆ ವರ್ಗದ ಕೊಠಡಿಯಲ್ಲಿ ಇದ್ದಾಳೆ. ರ‌್ಯಾಗಿಂಗ್ ನಡೆದಿರುವ ಕುರಿತು ವಿದ್ಯಾರ್ಥಿನಿಯಿಂದ ಹಾಗೂ ಸಹಪಾಠಿಗಳಿಂದ ಪ್ರಾಚಾರ್ಯರಿಗಾಗಲಿ, ಆಡಳಿತ ಮಂಡಳಿಗಾಗಲಿ ದೂರು ಬಂದಿಲ್ಲ. ನಮ್ಮ ಮಹಾವಿದ್ಯಾಲಯದಲ್ಲಿ ಇದು ವರೆಗೂ ರ‌್ಯಾಗಿಂಗ್ ನಡೆದ ಘಟನೆಗಳು ಇಲ್ಲ, ಅವಕಾಶ ಕೂಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಿರ್ದೇಶಕ, ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಘಟನೆ ತನಿಖೆಗೆ ಪೊಲೀಸರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ತಪ್ಪಿತಸ್ಥರ ಮೇಲೆ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸದಸ್ಯರಾದ ವಿಠ್ಠಲಸಾ ಕಾವಡೆ, ಬಾಲಮುಕುಂದ ತಾಪಡಿಯಾ, ವಿಶ್ವನಾಥ ಅಂಗಡಿ, ಅಶೋಕ ಹೆಗಡೆ, ಎಸ್.ಎಸ್. ನಾಯನೇಗಲಿ, ಪ್ರಾಚಾರ್ಯ ಎನ್.ವೈ.ಬಡನ್ನವರ ಇದ್ದರು.