ಜಿಲ್ಲೆ

ತೆಪ್ಪ ಸಂಚಾರ ಮತ್ತೆ ಸ್ಥಗಿತ

ಕಿರಣ್ ಗೌಡ.ಜಿ

ಹನೂರು: ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಬಿಟ್ಟಿರುವುದರಿಂದ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್ ಮೈದುಂಬಿ ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತೆಪ್ಪ ಸಂಚಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟದಿಂದ 50 ಕಿಮೀ ದೂರದಲ್ಲಿರುವ ಹೊಗೇನಕಲ್ ಫಾಲ್ಸ್ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿದೆ. ಇಲ್ಲಿಗೆ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರು ಹಾಗೂ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಕಳೆದ ತಿಂಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ್ದರಿಂದ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವಿನ ನೀರಿನ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ಜು.27 ರಂದು ಕಾವೇರಿ ನದಿಗೆ ಹೆಚ್ಚಿನ ನೀರನ್ನು ಹರಿಸಲಾಗಿತ್ತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಹೊಗೇನಕಲ್ ಫಾಲ್ಸ್‌ಗೆ ಆಗಮಿಸುವ ಪ್ರವಾಸಿಗರು, ತೆಪ್ಪ ಸಂಚಾರವನ್ನು ನಿಷೇಧಿಸಲಾಗಿತ್ತು. ಹಾಗೆಯೇ ಹೆಚ್ಚಿನ ನೀರನ್ನು ಬಿಟ್ಟ ಕಾರಣ ತಾಲೂಕಿನ ದಂಟಳ್ಳಿ ಸಮೀಪದ ಕಾವೇರಿ ನದಿಯಾಚೆಯ ದಬ್ಬಗೂಳಿ ಶ್ರೀ ಬವಸವೇಶ್ವರ ಸ್ವಾಮಿಯ ದೇಗುಲಕ್ಕೂ ನೀರು ಆವರಿಸಿ ಮುಳುಗುವ ಆತಂಕ ಎದುರಾಗಿತ್ತು. ಇದೀಗ ಮತ್ತೆ ಹೆಚ್ಚಿನ ನೀರನ್ನು ಹರಿಬಿಡಲಾಗಿದೆ.

ತೆಪ್ಪ ಸಂಚಾರ ಮತ್ತೆ ಸ್ಥಗಿತ: ಸೋಮವಾರದಿಂದ ಕೆಆರ್‌ಎಸ್‌ನಿಂದ 80 ಸಾವಿರದಿಂದ 1.20 ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚಿನ ನೀರು ಕಾವೇರಿ ನದಿಗೆ ಬಿಡಲಾಗಿದೆ. ಇದರಿಂದ ಹೊಗೇನಕಲ್ ಫಾಲ್ಸ್‌ನಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಹಾಗಾಗಿ ಪ್ರವಾಸಿಗರು ಹಾಗೂ ತೆಪ್ಪ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದ ಕಳೆದ 15 ದಿನಗಳಿಂದಷ್ಟೇ ತೆಪ್ಪ ಸಂಚಾರವನ್ನು ಮರು ಆರಂಭಿಸಿದ ಅಂಬಿಗರು ಮತ್ತೆ ಕೆಲಸವಿಲ್ಲದೇ ಕೈ ಕಟ್ಟಿ ಕೂರುವಂತಾಗಿದೆ.

ಫಾಲ್ಸ್‌ನಲ್ಲಿ ಭೋರ್ಗರೆತದ ಸದ್ದು: ಕಾವೇರಿ ನದಿಗೆ ಹೆಚ್ಚಿನ ನೀರನ್ನು ಹರಿ ಬಿಟ್ಟಿರುವುದರಿಂದ ಈ ಭಾಗದ ಮೇಕೆದಾಟಿನ ಮೂಲಕ ಕಾವೇರಿ ವನ್ಯಜೀವಿ ಧಾಮದ ಕಾನನದ ನಡುವೆ ಹಾದು ಹೋಗಿರುವ ನದಿಯಲ್ಲಿ ನೀರಿನ ಭೋರ್ಗರೆತದ ಸದ್ದು ಹೆಚ್ಚಾಗಿದೆ. ಜತೆಗೆ ಕಲ್ಲುಬಂಡೆಗಳನ್ನು ಹೊಂದಿರುವ ಹೊಗೇನಕಲ್ ಜಲಪಾತದಲ್ಲಿ ರುದ್ರರಮಣೀಯ ದೃಶ್ಯದ ಸದ್ದು ಝೇಂಕರಿಸುತ್ತಿದೆ. ಪ್ರವಾಸಿಗರನ್ನು ಬೋಟಿಂಗ್‌ಗೆ ಕರೆದೊಯ್ಯುವ ಮಾರ್ಗದ ಮೆಟ್ಟಿಲಿನ ಮೇಲೆಯೂ ನೀರು ಆವರಿಸಿದೆ. ಕಾವೇರಿ ಒಡಲಿನ ಮೂಲಕ ನೀರು ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತಿದೆ. ಇತ್ತ ಗೋಪಿನಾಥಂ, ಸೋರೆಕಾಯಿ ಮಡುವಿನ ಬಳಿ ಹಿನ್ನೀರಿನ ಪ್ರಮಾಣವೂ ಹೆಚ್ಚಾಗುತ್ತಿದೆ

ಪ್ರವಾಸಿಗರಲ್ಲಿ ನಿರಾಸೆ: ಕಳೆದ 15 ದಿನದ ಹಿಂದೆ ತೆಪ್ಪ ಸಂಚಾರವನ್ನು ಸ್ಥಗಿತಗೊಳಿಸಿದ್ದ ವೇಳೆ ಆಗಮಿಸಿದ್ದ ಪ್ರವಾಸಿಗರು ಫಾಲ್ಸ್‌ನ ರುದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ನಿರಾಸೆ ಉಂಟಾಗಿತ್ತು. ತೆಪ್ಪ ಸಂಚಾರವನ್ನು ಮರು ಆರಂಭಿಸಿದ ಬಳಿಕ ಹೆಚ್ಚಿನ ಪ್ರವಾಸಿಗರು ಹೊಗೇನಕಲ್ ಫಾಲ್ಸ್‌ಗೆ ಆಗಮಿಸಿ ಬೋಟಿಂಗ್ ಮೂಲಕ ತೆರಳಿ ಫಾಲ್ಸ್ ದೃಶ್ಯ ಸವಿದಿದ್ದರು. ಆದರೆ ಇದೀಗ ಮತ್ತೆ ತೆಪ್ಪ ಸಂಚಾರ ಸ್ಥಗಿತದಿಂದ ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದೆ.