ಬೇಲೂರು: ಬೆಳೆ ಹಾನಿ ಜತೆಗೆ ಪ್ರಾಣ ಹಾನಿ ಮಾಡುವ ಮೂಲಕ ಉಪಟಳ ನೀಡುತಿದ್ದ ಎರಡು ಕಾಡಾನೆಗಳಿಗೆ ಅರಣ್ಯ ಇಲಾಖೆ ತಂಡ ರೇಡಿಯೋ ಕಾಲರ್ ಅಳವಡಿಸಿದ್ದಾರೆ.
ತಾಲೂಕಿನಲ್ಲಿ ಈಗಾಗಲೇ ಬೀಡು ಬಿಟ್ಟಿರುವ ಬೀಟಮ್ಮ ಹಾಗೂ ಭುವನೇಶ್ವರಿ ಗುಂಪಿನಲ್ಲಿದ್ದ ಸಾಕಷ್ಟು ಆನೆಗಳು ನೂರಾರು ಎಕರೆಯಲ್ಲಿ ಬೆಳೆ ನಾಶ ಮಾಡುವುದರೊಂದಿಗೆ ಮನುಷ್ಯರನ್ನು ಬಲಿ ತೆಗೆದುಕೊಂಡ ಪ್ರಕರಣಗಳು ನಡೆದಿವೆ. ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನಿರಂತರ ಕಾರ್ಯಚರಣೆ ನಡೆಸಿ ಸೆರೆ ಹಿಡಿದು ಅಭಯಾರಣ್ಯ ಹಾಗೂ ಆನೆ ಶಿಬಿರಕ್ಕೆ ಕಳುಹಿಸಿದೆ.
ಮಲೆನಾಡು ಭಾಗದಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿರುವ ಬೀಟಮ್ಮ ಗ್ಯಾಂಗಿನ ಎರಡು ಗಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಆನೆಗಳನ್ನು ಗುರುತಿಸಲಾಗಿತ್ತು. ಕಳೆದ ಮಂಗಳವಾರ ತಾಲೂಕಿನ ವಾಟೇಹಳ್ಳಿ ಸಮೀಪದಲ್ಲಿ ಅಧಿಕಾರಿಗಳು ಮತ್ತು ಇಟಿಎಫ್ ಸಿಬ್ಬಂದಿ ಬೆಳಗ್ಗೆಯಿಂದಲೂ ಕಾಡಾನೆಗಳ ಜಾಡಿನ ಮಾಹಿತಿ ಪಡೆದು ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದ್ದರು. ಆದರೆ, ಅವುಗಳು ಬೀಟಮ್ಮ ಗ್ಯಾಂಗಿನ ಕಾಡಾನೆಗಳ ಹಿಂಡಿನೊಂದಿಗೆ ಸೇರಿಕೊಂಡಿದ್ದರಿಂದ ಸಾಕಷ್ಟು ಸಮಯ ಬೇರ್ಪಡಿಸಲು ಸಾಕಾನೆಗಳೊಂದಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜತೆಗೆ ಅರಿವಳಿಕೆ ನೀಡಲು ವೈದ್ಯರು ಸಾಕಷ್ಟು ಶ್ರಮ ವಹಿಸಿದರೂ ಕಾಫಿ ತೋಟದೊಳಗೆ ಮತ್ತು ಸಮೀಪದ ಕಾಡಿನೊಳಕ್ಕೆ ಸೇರಿ ಕಣ್ಮರೆಯಾಗಿದ್ದರಿಂದ ಅಧಿಕಾರಿಗಳು ಕಾರ್ಯಾಚರಣೆಗೆ ಸ್ಥಗಿತಗೊಳಿಸಿ ವಾಪಸಾಗಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಗುರುವಾರ ಬೆಳಗ್ಗೆ 8ಗಂಟೆಯಿಂದಲೇ ಕುಮ್ಕಿ ಸಾಕಾನೆಗಳಾದ ಪ್ರಶಾಂತ, ಕಂಜನ್, ಧನಂಜಯ, ಮಹೇಂದ್ರ, ಹರ್ಷ, ಕರ್ನಾಟಕ ಭೀಮಾ, ಏಕಲವ್ಯ ಆನೆಗಳೊಂದಿಗೆ ಕಾರ್ಯಾಚರಣೆಗಿಳಿದು ತಾಲೂಕಿನ ಹೆಗ್ಗದ್ದೆ ಎಸ್ಟೇಟ್ ಬಳಿ ಒಂದು ಕಾಡಾನೆ, ಸುಂಡೇಕೆರೆ ಎಸ್ಟೇಟಿನಲ್ಲಿ ಗುಂಪಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿದ್ದ ಇನ್ನೊಂದು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಬೀಳಿಸಿದ ನಂತರ ರೇಡಿಯೋ ಕಾಲರ್ ಅಳವಡಿಸಿದ್ದಾರೆ.
ಅಧಿಕಾರಿಗಳ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಗೆ ರೈತರು, ಬೆಳೆಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನುಳಿದಿರುವ ಕಾಡಾನೆಗಳನ್ನು ಆದಷ್ಟು ಬೇಗ ದೂರದ ಕಾಡಿಗಟ್ಟುವಂತೆ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಡಿಎಫ್‌ಒ ಸೌರಭ್ ಕುಮಾರ್, ಎಸಿಎಫ್ ಮೋಹನ್ ಕುಮಾರ್, ಖಲಂದರ್, ಮಧುಸೂದನ್, ವಲಯ ಅರಣ್ಯಾಧಿಕಾರಿ ಯತೀಶ್, ಹೇಮಂತ್, ಇಟಿಎಫ್ ಆರ್‌ಎಫ್‌ಒ ಸುನೀಲ್ ಸೇರಿದಂತೆ ಪಶು ಇಲಾಖೆ ವೈದ್ಯರು, ಅಧಿಕಾರಿಗಳು ಮತ್ತು ಮಾವುತರು, ಪೊಲೀಸರು ಸಿಬ್ಬಂದಿ ಇದ್ದರು.