ವಿಜಯವಾಣಿ ದಕ್ಷಿಣ ಮಾಯಾಪುರ್ ಧಾಮ್‌ನಲ್ಲಿ ಏರ್ಪಡಿಸಿದ್ದ ಕೃಷ್ಣವೇಷ ಸ್ಪರ್ಧೆ ವಿಜೇತ ಮಕ್ಕಳೊಂದಿಗೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಇಸ್ಕಾನ್ ಕರ್ನಾಟಕ ಪ್ರಾದೇಶಿಕ ಕಾರ್ಯದರ್ಶಿ ಸುಧೀರ ಚೈತನ್ಯದಾಸ್ ಹಾಗೂ ವಿಜಯವಾಣಿ ಶಿವಮೊಗ್ಗ ಆವೃತ್ತಿ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಇದ್ದಾರೆ. 
ಜಿಲ್ಲೆ

ಇಸ್ಕಾನ್‌ನಲ್ಲಿ ಕಂಗೊಳಿಸಿದ ರಾಧಾ-ಕೃಷ್ಣರು

Shivamogga - Desk - Praveena Kumar S

ಶಿವಮೊಗ್ಗ: ಅಲ್ಲಿ ಮುದ್ದು ಕೃಷ್ಣರ, ಸುಂದರ ರಾಧೆಯರ ಪ್ರಪಂಚವೇ ಸೃಷ್ಟಿಯಾಗಿತ್ತು. ಪುಟ್ಟ ಮಕ್ಕಳು ಕೃಷ್ಣನ ರೂಪದಲ್ಲಿ ಕಂಗೊಳಿಸಿದರೆ, ರಾಧೆಯರು ಅತ್ತಿಂದಿತ್ತ ಚುರುಕಾಗಿ ಓಡಾಡಿಕೊಂಡಿದ್ದರು. ಭಗವದ್ಗೀತೆಯ ಶ್ಲೋಕಗಳೂ ಮೊಳಗಿದವು. ಅದೊಂದು ನಂದ ಗೋಕುಲದಂತೆ ಕಂಗೊಳಿಸುತ್ತಿತ್ತು. ಪಾಲಕರ ಉತ್ಸಾಹ, ತಾಯಂದಿರ ಸಡಗರ ಗರಿಗೆದರಿತ್ತು.
ಆರು ತಿಂಗಳ ಮಕ್ಕಳಿಂದ 6 ವರ್ಷದ ಮಕ್ಕಳವರೆಗೂ ಬಗೆ ಬಗೆಯ ವೇಷ ತೊಟ್ಟು, ಹಾವ-ಭಾವಗಳಿಂದಲೇ ಮನ ಸೆಳೆದರು. ಪುಟ್ಟ ಮಕ್ಕಳು ತುಂಟ ನಗುವಿನಿಂದ ಬಾಲಕೃಷ್ಣರಾದರೆ, ದೊಡ್ಡ ಮಕ್ಕಳು ಶ್ಲೋಕ, ಗೀತೆಯಿಂದ ಕೃಷ್ಣನ ಅವತಾರವನ್ನು ಕಣ್ಣಮುಂದೆ ನಿಲ್ಲಿಸಿದರು. ಹಲವು ಮಕ್ಕಳನ್ನು ವಿಶಿಷ್ಟ ಪರಿಕಲ್ಪನೆಯಲ್ಲಿ ಅಣಿಗೊಳಿಸಿದ್ದು ನೆರೆದಿದ್ದವರ ಮನಸೂರೆಗೊಂಡಿತು.
ಈ ದೃಶ್ಯಾವಳಿಗಳು ಕಂಡುಬಂದಿದ್ದು ಬಿದರೆಯ ದಕ್ಷಿಣ ಮಾಯಾಪುರ್ ಧಾಮ್-ಶಿವಮೊಗ್ಗ ಇಸ್ಕಾನ್ ಕೃಷ್ಣ ಮಠದಲ್ಲಿ ವಿಜಯವಾಣಿ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ. 50ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಲ್ಲಿ ಪಾಲ್ಗೊಂಡರು.
ಸಂಜೆ 4.30ಕ್ಕೆ ಆರಂಭವಾದ ಕೃಷ್ಣ ವೇಷ ಸ್ಪರ್ಧೆ ಮುಕ್ತಾಯವಾಗಿದ್ದು ಸಂಜೆ 6.30ಕ್ಕೆ. ಮಗುವಿನ ಕೃಷ್ಣ ವೇಷ ಸ್ಪರ್ಧೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೆಲ ಕುಟುಂಬಗಳ ಹಿರಿಯರೂ ಆಗಮಿಸಿದ್ದರು. ಬೇಗ ಅಲಂಕಾರಗೊಂಡ ಮಕ್ಕಳು ಸ್ಪರ್ಧೆಗೆ ಮುನ್ನವೇ ವೇಷಭೂಷಣ ಕಿತ್ತುಹಾಕಲು ಮುಂದಾಗುತ್ತಿದ್ದರೆ, ಅಂತಹ ಮಕ್ಕಳನ್ನು ಸುಮ್ಮನಿರಿಸುವಷ್ಟರಲ್ಲಿ ಕೆಲವು ತಾಯಂದಿರಿಗೆ ಸಾಕುಬೇಕಾಯಿತು. ವೇದಿಕೆ ಹತ್ತಿದ ಕೆಲ ಚಿಣ್ಣರು ಪಾಲಕರ ಸಂಜ್ಞೆಗಳನ್ನು ಪಾಲಿಸದೆ ಪೇಚಿಗೆ ಸಿಲುಕಿಸಿದವು. ಕೆಲ ಮಕ್ಕಳು ಒಂದೆಡೆ ನಿಲ್ಲದೆ ವೇದಿಕೆಯುದ್ದಕ್ಕೂ ಪುಟಾಣಿ ಹೆಜ್ಜೆಗಳನ್ನಿಟ್ಟು, ತಮ್ಮದೇ ಲೋಕದಲ್ಲಿ ವಿಹರಿಸುತ್ತ ನೆರೆದಿದ್ದವರ ಚಪ್ಪಾಳೆಗೆ ಪಾತ್ರರಾದರು.
ಕೃಷ್ಣ ವೇಷ ಸ್ಪರ್ಧೆ ವಿಜೇತರ ವಿವರ: ಮೂರು ವರ್ಷದೊಳಗಿನವರ ವಿಭಾಗ: 1. ಶ್ರೀಹಾನ್ ಆದ್ಯಂತ ಗೌಡ, 2. ಸಮನ್ವಿ

  1. ಓಜಸ್, ಸಮಾಧಾನಕರ ಬಹುಮಾನ. 1.ವೃಷಭ್ ಎಸ್. ಗೌಡ, 2.ಮನ್ವಿತ್ ಗೌಳಿ.
    4-6 ವರ್ಷದೊಳಗಿನವರ ವಿಭಾಗ: 1. ಎಂ.ಆಯಷಿ, 2. ಮೋಹಕ ರಾಘವ್, 3. ಶಾಲಿನಿ, ಸಮಾಧಾನಕರ ಬಹುಮಾನ. 1.ಟಿ.ವಿ.ಆದ್ವಿಕ್, 2.ಶಮಂತ್.