ಮಂಡ್ಯ: ದೇಶದಲ್ಲಿ ಹುಚ್ಚುನಾಯಿ ಕಡಿತದಿಂದ ಸಾವಿನ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಬಗ್ಗೆ ಜಾಗೃತಿ ಅತ್ಯಗತ್ಯವಾಗಿದೆ ಎಂದು ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ಎಸ್.ನಟರಾಜ್ ಸಲಹೆ ನೀಡಿದರು.
ನಗರದ ಜಿಲ್ಲಾ ಪಾಲಿಕ್ಲಿನಿಕ್ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಕುಪ್ರಾಣಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಚುಚ್ಚುಮದ್ದನ್ನು ನೀಡುತ್ತಿದ್ದೇವೆ. ಇದರ ಸದುಪಯೋಗವನ್ನು ಎಲ್ಲ ಸಾಕು ಪ್ರಾಣಿಗಳ ಮಾಲೀಕರು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಯಾವುದೇ ಮನುಷ್ಯನಿಗೆ ನಾಯಿ ಕಚ್ಚಿದ ಜಾಗಕ್ಕೆ ಸೋಪು ನೀರಿನಿಂದ ತೊಳೆಯುವುದು ಬಹಳ ಮುಖ್ಯ. ಇದರಿಂದ ರೇಬಿಸ್ ಶರೀರ ಪ್ರವೇಶಿಸುವುದನ್ನು ತಡೆಗಟ್ಟಬಹುದು. ರೇಬಿಸ್‌ನಿಂದ ಮರಣ ಹೊಂದುವ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ಉಚಿತ ಲಸಿಕಾ ಶಿಬಿರನ್ನು ಆಯೋಜಿಸುತ್ತಿದ್ದೇವೆ. ತಪ್ಪದೇ ಲಸಿಕೆ ಹಾಕಿಸಿದರೆ ಯಾವುದೇ ಪ್ರಾಣಹಾನಿ ಸಂಭವಿಸಲ್ಲ ಎಂದು ತಿಳಿಸಿದರು.
ಪಶುವೈದ್ಯಾಧಿಕಾರಿ ಡಾ.ರಮೇಶ್‌ರಾಜು ಮಾತನಾಡಿ, ರೇಬಿಸ್ ಮಾರಣಾಂತಿಕ ರೋಗವಾಗಿದೆ. ಈ ರೋಗ ಬಂದರೆ ಸಾವು ಖಚಿತವಾಗಿದೆ. ಲಸಿಕೆಯಿಂದಷ್ಟೇ ರೋಗ ನಿರ್ಣಾಮ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಸಿದ್ದೇಶ್, ಡಾ.ಚೇತನ. ಡಾ.ಪ್ರಕಾಶ್, ಡಾ.ಸಯ್ಯದ್, ಡಾ.ಚೈತ್ರಾ, ಡಾ.ಗೀತಾ ಇತರರಿದ್ದರು.