ಕುಷ್ಟಗಿ: ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ಮುಂಜಾಗ್ರತೆ ವಹಿಸಿ ದೇಶವನ್ನು ರೇಬಿಸ್ ಮುಕ್ತವನ್ನಾಗಿಸಬೇಕಿದೆ ಎಂದು ಹಿರಿಯ ಪಶು ವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.
ಪಟ್ಟಣದ ಎಸ್‌ವಿಸಿ ಶಾಲೆಯಲ್ಲಿ ಪಶು ಪಾಲನಾ ಇಲಾಖೆಯಿಂದ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಬಿಸ್ ರೋಗಕ್ಕೆ ತುತ್ತಾಗಿ ಸಾವು ಸಂಭವಿಸುವುದರಲ್ಲಿ ಭಾರತ ಏಷ್ಯಾದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ 30ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಮಕ್ಕಳು ಅಧಿಕ ಸಂಖ್ಯೆಯಲ್ಲಿ ತುತ್ತಾಗುತ್ತಿದ್ದಾರೆ. 2030ರೊಳಗೆ ರೇಬಿಸ್ ಮುಕ್ತ ಭಾರತವನ್ನಾಗಿಸಲು ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿ ಮಾಡಿ ಅನುಷ್ಠಾನಗೊಳಿಸುತ್ತಿದೆ. ರೇಬಿಸ್ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು.
ಬೀದಿ ನಾಯಿಗಳು, ಸಾಕಿದ ನಾಯಿಗಳು ಕಚ್ಚಿದರೆ ಅಥವಾ ಪರಚಿದರೆ ಗಾಯಕ್ಕೆ ಸೋಪು ಹಚ್ಚಿ ಶುದ್ಧ ನೀರಿನಿಂದ ತೊಳೆಯಬೇಕು. ಕೂಡಲೇ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು. ನಾಯಿ ಇನ್ನಿತರ ಸಾಕು ಪ್ರಾಣಿಗಳಿಗೂ ಲಸಿಕೆ ಹಾಕಿಸಿ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ರವಿಕುಮಾರ ಹಿರೇಮಠ, ಕಂದಕೂರಪ್ಪ ವಾಲ್ಮೀಕಿ, ವೈದ್ಯರಾದ ಮಲ್ಲಪ್ಪ ಪಲೋಟಿ, ಪಾರ್ವತಿ ಪಲೋಟಿ, ಲ್ಯಾಬ್ ತಂತ್ರಜ್ಞ ಬಾಲಾಜಿ ಬಳಿಗಾರ, ಎಸ್‌ವಿಸಿ ಸಂಸ್ಥೆಯ ಸಿಇಒ ಜಗದೀಶ, ಪಶು ಪಾಲನೆ ಇಲಾಖೆ ಸಿಬ್ಬಂದಿ ಸೌಮ್ಯಾ, ಪ್ರವೀಣ, ವೀರೇಶ, ರಿಯಾಜ್, ಕರೀಂಸಾಬ, ಪಶು ಸಖಿಯರಾದ ನಿರ್ಮಲಾ, ಹುಲಿಗೆಮ್ಮ ಇತರರು ಇದ್ದರು.