- ಪ್ರಕಾಶ್ ಮಂಜೇಶ್ವರ ಮಂಗಳೂರು
- ಉತ್ತರಪ್ರದೇಶದ ಗಾಜಿಯಾಬಾದ್ ಎಂಬಲ್ಲಿ ಹುಚ್ಚುನಾಯಿ ಕಡಿತಕ್ಕೆ ಒಳಗಾದ ಬಾಲಕ ಒದ್ದಾಡಿ ತಂದೆಯ ತೊಡೆಯ ಮೇಲೆಯೇ ಕೊನೆಯುಸಿರೆಳೆದ ಹೃದಯವಿದ್ರಾವಕ ದೃಶ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು! ಇಂತಹ ಪ್ರಕರಣಗಳು ನಿರಂತರ ನಡೆಯುತ್ತಿದ್ದರೂ, ಬೆಳಕಿಗೆ ಬರುವುದು ಕಡಿಮೆ.
- ವಾರ್ಷಿಕ ಸರಾಸರಿ ದಕ್ಷಿಣ ಕನ್ನಡದಲ್ಲಿ ಇಬ್ಬರಿಂದ ಮೂವರು ಹಾಗೂ ಉಡುಪಿ ಜಿಲ್ಲೆಗಳಲ್ಲೂ ಇಬ್ಬರು ರೇಬಿಸ್ ರೋಗಕ್ಕೆ ಬಲಿಯಾಗಿದ್ದಾರೆ. ಈ ವರ್ಷ ದ.ಕ.ದಲ್ಲಿ 13,205 ಮತ್ತು ಉಡುಪಿಯಲ್ಲಿ 11,407 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.
- ಬೆಕ್ಕು, ತೋಳ ಸಹಿತ ವಿವಿಧ ಪ್ರಾಣಿಗಳಿಂದ ರೇಬಿಸ್ ಹರಡುವ ಸಾಧ್ಯತೆ ಇದೆಯಾದರೂ, ಇಲ್ಲಿಯ ತನಕ ಈ ರೋಗದಿಂದ ಮೃತಪಟ್ಟವರಲ್ಲಿ ಶೇ.99 ಮಂದಿ ನಾಯಿ ಕಡಿತಕ್ಕೆ ಒಳಗಾದವರೇ. ಒಮ್ಮೆ ಈ ರೋಗದ ವೈರಸ್ ದೇಹದ ಒಳಗೆ ಬೆಳೆಯಲು ಆರಂಭಿಸಿದರೆ ಕಡಿತಕ್ಕೊಳಗಾದವರು ಬದುಕುಳಿಯಲು ಸಾಧ್ಯವೇ ಇಲ್ಲ. ಆದ್ದರಿಂದ ರೇಬಿಸ್ ಸಾವುಗಳನ್ನು ವಿಶ್ವ ಸಂಸ್ಥೆ ಗಂಭೀರವಾಗಿಯೇ ಪರಿಗಣಿಸಿದೆ.
- ಶೇ.36 ಭಾರತೀಯರು: 2030 ಒಳಗೆ ರೇಬಿಸ್‌ಮುಕ್ತ ಜಗತ್ತು ವಿಶ್ವ ಸಂಸ್ಥೆಯ ಗುರಿ. ಇದು ಜಾಗತಿಕ ನೀತಿ. ಜಗತ್ತಿನಾದ್ಯಂತ ವರ್ಷಂಪ್ರತಿ 59 ಸಾವಿರ ಜನರು ರೇಬಿಸ್‌ನಿಂದ ಅಸುನೀಗುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ 20 ಸಾವಿರ. ಅಂದರೆ ರೇಬಿಸ್‌ಗೆ ತುತ್ತಾಗಿ ಸಂಭವಿಸುವ ಸಾವುಗಳಲ್ಲಿ ಶೇ.36 ಭಾರತದಲ್ಲಿ ಇದೆ. ಆದ್ದರಿಂದ ರೇಬಿಸ್‌ಮುಕ್ತ ಜಗತ್ತು ರೂಪಿಸುವ ದಿಕ್ಕಿನಲ್ಲಿ ಭಾರತದ ದೊಡ್ಡ ಕೊಡುಗೆ ಅಗತ್ಯ. ಭಾರತದಲ್ಲಿ ರೇಬಿಸ್‌ನಿಂದ ಕೊನೆಯುಸಿರೆಳೆಯುವವರಲ್ಲಿ ಶೇ.60 ಮಂದಿ 15 ವರ್ಷದೊಳಗಿನವರು ಎಂಬುದು ಆಘಾತಕಾರಿ ಸಂಗತಿ. ನಾಯಿ ಕಡಿತ ಪ್ರಕರಣ ಬೆಳಕಿಗೆ ಬರುವಲ್ಲಿ ಆಗುವ ವಿಳಂಬವೂ ಈ ಅನಾಹುತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ನಿಯಂತ್ರಣ ಮಾಸಾಚರಣೆ
ಪ್ರಾಣಿ ಗಣತಿ ಅಂಕಿಅಂಶ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.72 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 1.18 ಲಕ್ಷ ನಾಯಿಗಳಿವೆ. ಇದರಲ್ಲಿ ಬೀದಿನಾಯಿಗಳೂ ಇವೆ. ಸೆ.28ರಿಂದ ಅಕ್ಟೋಬರ್ 27 ತನಕ ರೇಬಿಸ್ ನಿಯಂತ್ರಣ ಮಾಸಾಚರಣೆಯಿದ್ದು, ಉಭಯ ಜಿಲ್ಲೆಗಳಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
ದ.ಕ.ಜಿಲ್ಲಾದ್ಯಂತ ಸಾಕುನಾಯಿಗಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ ಮುಂತಾದ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸಚಿಕಿತ್ಸೆ ಹಾಗೂ ಲಸಿಕೆ ನೀಡುವ ಕಾರ್ಯಕ್ರಮ ಇರಲಿದೆ.
- ಡಾ.ಅರುಣ್ ಕುಮಾರ್ ಶೆಟ್ಟಿ
ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ದ.ಕ.
ಕಳೆದ ಐದು ವರ್ಷಗಳಲ್ಲಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹಿಸಿದ 125 ನಾಯಿಗಳ ಮಿದುಳಿನ ಮಾದರಿಗಳನ್ನು ಪರೀಕ್ಷೆಗಾಗಿ ಮಂಗಳೂರು ಪಶುರೋಗ ತಪಾಸಣಾ ಕೇಂದ್ರ ಮೂಲಕ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿದೆ. ಇವುಗಳ ಪೈಕಿ ಶೇ.60 ಮಾದರಿಗಳಲ್ಲಿ ರೇಬಿಸ್ ದೃಢಪಟ್ಟಿದೆ.
- ಡಾ.ವಸಂತ ಶೆಟ್ಟಿ
ಪ್ರಾದೇಶಿಕ ಸಂಶೋಧನಾ ಅಧಿಕಾರಿ, ಪಶುರೋಗ ತಪಾಸಣಾ ಕೇಂದ್ರ, ಮಂಗಳೂರು