ಬೆಳಗಾವಿ: ಹುಚ್ಚು ನಾಯಿ ರೋಗ ತಡೆಗಟ್ಟುವುದರ ಜತೆಗೆ ಜನವಸತಿ ಪ್ರದೇಶಗಳಲ್ಲಿ ನಾಯಿಗಳ ಸಂತತಿ ನಿಯಂತ್ರಣವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪಶು ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ್ ದಿವಟರ್ ಹೇಳಿದರು.
ನಗರದ ಪಶು ಆಸ್ಪತ್ರೆ ಆವರಣದ ರೈತ ಭವನದಲ್ಲಿ ಬುಧವಾರ ಜಿಪಂ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹುಚ್ಚು ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ವಹಿಸಲೇಬೇಕು ಎಂದರು.
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ರಾಜು ಕುಲೇರ ಮಾತನಾಡಿ, ಜಿಲ್ಲೆಯಲ್ಲಿ ಸೆ.28 ರಿಂದ ಅ. 28 ರವರೆಗೆ ರೇಬಿಸ್ ರೋಗ ನಿಯಂತ್ರಣ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಶು ವೈದ್ಯಾಧಿಕಾರಿಗಳು ಸಿಬ್ಬಂದಿಯೊಂದಿಗೆ ಮನೆಮನೆಗೆ ತೆರಳಿ ನಾಯಿಗಳಿಗೆ ಉಚಿತ ಲಸಿಕೆ ನೀಡಬೇಕು. ಹುಚ್ಚುನಾಯಿ ರೋಗ ತಡೆಗಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಗದಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ ಸಜ್ಜನ, ಪ್ರಾದೇಶಿಕ ರೋಗ ತನಿಖಾ ಕೇಂದ್ರದ ಹಿರಿಯ ವೈದ್ಯ ಡಾ.ಶ್ರೀಕಾಂತ್ ಕೊವಳ್ಳಿ, ಡಾ.ಶಶಿಧರ ನಾಡಗೌಡ, ಕುರಿ ಮತ್ತು ಕುರಿ ಉತ್ಪನ್ನಗಳ ಮಂಡಳಿ ಉಪನಿರ್ದೇಶಕ ಡಾ.ಸುಧಾ ದೇವರೆಡ್ಡಿ, ಪಶು ವೈದ್ಯಕೀಯ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಾ.ಧರೆಪ್ಪ ಹೊಸಮನಿ, ಉಪಾಧ್ಯಕ್ಷ ಡಾ.ವಿನಯ ಸಂಗೊಳ್ಳಿ ಇತರರಿದ್ದರು.