- ಪ್ರಕಾಶ್ ಮಂಜೇಶ್ವರ ಮಂಗಳೂರು
ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಸ್ಥೆಗಳು ಇನ್ನು ಮುಂದೆ, ಬೀದಿನಾಯಿಗಳನ್ನು ಹಿಡಿದು, ಸ್ಥಳೀಯ ಸಂಸ್ಥೆಗಳು ಒದಗಿಸಿದ ಕೊಠಡಿಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ನಿರೋಧಕ ಲಸಿಕೆ ನೀಡಿ, ನಾಲ್ಕು ದಿನ ಆರೈಕೆ ಮಾಡಿ ಮರುದಿನ ಹಿಡಿದ ಜಾಗದಲ್ಲೇ ಅವುಗಳನ್ನು ಬಿಟ್ಟು ಬರುವ ಜವಾಬ್ದಾರಿಯನ್ನು ನಿರ್ವಹಿಸಲಿವೆ.
ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ನಿರ್ಮೂಲನೆ ಲಸಿಕೆ ನೀಡುವ ಹೊಣೆಯನ್ನು ಸ್ಥಳೀಯಾಡಳಿತ ಸಂಸ್ಥೆಗಳು ವಹಿಸಿಕೊಳ್ಳಬೇಕು. ನಾಯಿ ಕಡಿತಕ್ಕೊಳಗಾದಾತಗೆ ಸಂಭವಿಸುವ ನಷ್ಟದ ಪ್ರಮಾಣ ಪರಿಗಣಿಸಿ 5 ಸಾವಿರದಿಂದ 10 ಲಕ್ಷ ರೂ. ತನಕ ಸ್ಥಳೀಯಾಡಳಿತ ಸಂಸ್ಥೆಗಳು ಪರಿಹಾರ ಒದಗಿಸಬೇಕು ಎಂಬ ಹೈಕೋರ್ಟ್ ಆದೇಶ ಬಳಿಕ ಹುಚ್ಚುನಾಯಿ ರೋಗ ನಿಯಂತ್ರಣ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
* ಜಿಲ್ಲಾಧಿಕಾರಿ ಸುತ್ತೋಲೆ: ಹುಚ್ಚು ನಾಯಿ ರೋಗ ಲಸಿಕೆ ಮತ್ತು ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಉದ್ದೇಶದಿಂದ ಸರ್ಕಾರದ ಆದೇಶ ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಸುತ್ತೋಲೆ ಹೊರಡಿಸಿದ್ದಾರೆ. ಜಿಪಂ ಸಿಇಒ ಎಲ್ಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹುಚ್ಚುನಾಯಿ ರೋಗಕ್ಕೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಲೂಯಿ ಪಾಶ್ಚರ್ ನಿಧನ ಹೊಂದಿದ ದಿನ ಸೆಪ್ಟಂಬರ್ 28. ಆದ್ದರಿಂದ ಈ ವರ್ಷ ಸೆಪ್ಟಂಬರ್ ತಿಂಗಳು ರೇಬಿಸ್ ಮಾಸಾಚರಣೆ ನಡೆಸಲಾಗುತ್ತದೆ.
//ಬಾಕ್ಸ್//
ಕಂಟ್ರೋಲ್ ಹೇಗೆ?
ಅರಿವು ಕಾರ್ಯಕ್ರಮದಡಿ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕನಿಷ್ಠ ಎರಡು ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ರೇಬಿಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜತೆಗೆ, ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಸಾಕುನಾಯಿಗಳಿಗೆ ಲಸಿಕೆ ಹಾಕಿಸುವುದು ಮತ್ತು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸಂಸ್ಥೆಗಳ ಮೂಲಕ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸುವುದು ರೇಬಿಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸೇರಿದೆ.
********
ಅಧಿಕ ಪ್ರಮಾಣ ದೃಢ
ಮಂಗಳೂರು ಪಶುರೋಗ ತಪಾಸಣಾ ಕೇಂದ್ರದಿಂದ ಬೆಂಗಳೂರಿನ ಪ್ರಯೋಗಾಲಯಕ್ಕೆ 2017ರಿಂದ 2024 ಜುಲೈ ತನಕ ಕಳುಹಿಸಿದ ಶಂಕಿತ 159 ನಾಯಿಗಳ ಮಿದುಳಿನ ಮಾದರಿಗಳಲ್ಲಿ 105 ಪಾಸಿಟಿವ್ (ಶೇ.66) ಪತ್ತೆಯಾಗಿ, ರೇಬಿಸ್ ದೃಢಪಟ್ಟಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೇಬಿಸ್ ಅಧಿಕ ಪ್ರಮಾಣದಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ಆದರೆ ಇಲ್ಲಿಯ ಜನರಲ್ಲಿ ಹೆಚ್ಚು ಜಾಗೃತಿ ಇರುವುದರಿಂದ ಇದರಿಂದ ಸಂಭವಿಸುವ ಸಾವುಗಳ ಪ್ರಮಾಣ ಕನಿಷ್ಠ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ. ವಾರ್ಷಿಕ ಸರಾಸರಿ ದಕ್ಷಿಣ ಕನ್ನಡದಲ್ಲಿ 2-3 ಹಾಗೂ ಉಡುಪಿ ಜಿಲ್ಲೆಗಳಲ್ಲೂ ಇಬ್ಬರು ರೇಬಿಸ್ ರೋಗದಿಂದ ಮೃತಪಟ್ಟಿದ್ದಾರೆ. 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,205 ಮತ್ತು ಉಡುಪಿಯಲ್ಲಿ 11,407 ಮಂದಿ ನಾಯಿಕಡಿತಕ್ಕೆ ಒಳಗಾಗಿದ್ದಾರೆ. ಬೆಕ್ಕು, ತೋಳ ಸಹಿತ ವಿವಿಧ ಪ್ರಾಣಿಗಳಿಂದ ರೇಬಿಸ್ ಹರಡುವ ಸಾಧ್ಯತೆ ಇದೆಯಾದರೂ, ಈವರೆಗೆ ಈ ರೋಗದಿಂದ ಮೃತಪಟ್ಟವರಲ್ಲಿ ಶೇ.99 ಮಂದಿ ನಾಯಿ ಕಡಿತಕ್ಕೆ ಒಳಗಾದವರು.
***
ರೇಬಿಸ್ ನಿರೋಧಕ ಚುಚ್ಚುಮದ್ದು ಎಲ್ಲ ಪಶು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಎಲ್ಲ ಸಾಕುಪ್ರಾಣಿಗಳಿಗೆ (ಮುಖ್ಯವಾಗಿ ನಾಯಿ) ಲಸಿಕೆ ಹಾಕಿಸಿ ದಕ್ಷಿಣ ಕನ್ನಡವನ್ನು ರೇಬಿಸ್‌ಮುಕ್ತ ಜಿಲ್ಲೆಯಾಗಿ ರೂಪಿಸಲು ಸಾರ್ವಜನಿಕರು ಸಹಕರಿಸಬೇಕು.
- ಡಾ.ಅರುಣ್ ಕುಮಾರ್ ಶೆಟ್ಟಿ
ಉಪ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ದ.ಕ.