ರಬಕವಿ/ಬನಹಟ್ಟಿ: ಸ್ವಚ್ಛ ಭಾರತ ಮಿಷನ್ ಅಡಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿದ್ದರೂ, ಪಟ್ಟಣದ ಸಾರ್ವಜನಿಕ ಶೌಚಗೃಹಗಳ ನಿರ್ವಹಣೆ ಇಂದಿಗೂ ಶೋಚನೀಯವಾಗಿದೆ.
ನಗರಸಭೆ ವ್ಯಾಪ್ತಿಯ ವಾರ್ಡ್ ನಂ.11ರಲ್ಲಿನ ಕೊಳಚೆ ಪ್ರದೇಶದ ಜನತೆ ಅನುಕೂಲಕ್ಕಾಗಿ ಬಯಲು ಶೌಚದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಳೆದೆರಡು ವರ್ಷಗಳಿಂದ ಸಾಮೂಹಿಕ ಶೌಚಗೃಹಗಳನ್ನು ನಿರ್ಮಿಸಿತ್ತು. ಆದರೆ, ಅವುಗಳ ಸಮರ್ಪಕ ನಿರ್ವಹಣೆ ಮಾಡದ ಕಾರಣ ಅವೆಲ್ಲ ಗಬ್ಬೆದ್ದು ನಾರುತ್ತಿರುವುದರಿಂದ ಮನೆಯಲ್ಲಿ ವಾಸಮಾಡದಂತಾಗಿದೆ ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು ಗುರುವಾರ ನಗರಸಭೆ ಎದುರು ಪ್ರತಿಭಟಿಸಿದರು.
ಪಟ್ಟಣದ ಅರ್ಧದಷ್ಟು ಜನತೆ ಇಲ್ಲಿನ ಪ್ರತ್ಯೇಕ ಪುರುಷ ಹಾಗೂ ಮಹಿಳಾ ಶೌಚಗೃಹಗಳನ್ನೇ ಅವಲಂಭಿಸಿದ್ದಾರೆ. ಶೌಚಗೃಹ ನಿರ್ವಹಣೆಗೆ 2 ರೂ. ನಿಗದಿ ಮಾಡಿದೆ. ಆದರೆ, ಶೌಚಗೃಹದ ಕಲ್ಮಶ ಹೊರಹೋಗದೇ ಜನತೆ ಮೂಗುಮುಚ್ಚಿಕೊಂಡೇ ಶೌಚಗೃಹಕ್ಕೆ ಬರಬೇಕಾಗಿದೆ. ಇಲ್ಲಿನ ಅವ್ಯವಸ್ಥೆಗೆ ಬೇಸತ್ತು ಜನ ಮತ್ತೆ ಬಯಲು ಶೌಚಕ್ಕೆ ತೆರಳುವ ಅನಿವಾರ್ಯತೆ ಬಂದೊದಗಿದೆ.
ಒಳಚರಂಡಿ ಸಂಪರ್ಕಕ್ಕೆ ಒತ್ತಾಯ
ಇಲ್ಲಿನ ಶೌಚಗೃಹಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿದರೇ ದುರ್ವಾಸನೆ ತಡೆಯಬಹುದು. ಮಲಿನ ನೀರು ಹೊರಹೋಗದಂತೆ ನಿರ್ವಹಿಸಬಹುದು. ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ನಗರಸಭೆ ಸದಸ್ಯೆ ಸುರೇಖಾ ಮನಗೂಳಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಹಾದೇವ ಭಸ್ಮೆ, ಸಂಪತ್ತಕುಮಾರ ಬೀಳಗಿ, ವಸಂತ ಕೋಪರ್ಡೆ, ಬಸವರಾಜ ಬೀಳಗಿ, ಓಂಪ್ರಕಾಶ ಮನಗೂಳಿ, ಗೋಪಾಲ ಕೋಪರ್ಡೆ, ಮಹಾದೇವ ಕೋಪರ್ಡೆ, ಶೋಭಾ ಗೋಂದಕರ, ಸರಿತಾ ಕೋಪರ್ಡೆ, ಶಾಂತಾ ಕೋಳೇಕರ, ಪಾರ್ವತಿ ಕೋಪರ್ಡೆ, ಸುರೇಖಾ ಕೋಪರ್ಡೆ ಉಪಸ್ಥಿತರಿದ್ದರು.
ನಗರಸಭೆ ನಿರ್ಲಕ್ಷೃದಿಂದ ಶೌಚಗೃಹಗಳ ಅವ್ಯವಸ್ಥೆಗೆ ಕಾರಣವಾಗಿದೆ. ತಕ್ಷಣ ಸ್ವಚ್ಛತೆಯೊಂದಿಗೆ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ವಹಣೆಯಾಗಬೇಕು.
ಸುರೇಖಾ ಮನಗೂಳಿ, ನಗರಸಭೆ ಸದಸ್ಯೆ
ಇಲ್ಲಿನ ನಿವಾಸಿಗಳ ತೊಂದರೆ ಹಿನ್ನೆಲೆ ಶೌಚಗೃಹಗಳು ಹಾಗೂ ಸೇಪ್ಟಿಕ್‌ಟ್ಯಾಂಕ್‌ಗಳನ್ನು ಕೂಡಲೇ ದುರಸ್ತಿಗೊಳಿಸಿ ಸರಿಪಡಿಸಲಾಗುವುದು.
ಶ್ರೀನಿವಾಸ ಜಾಧವ, ಪೌರಾಯುಕ್ತ, ರಬಕವಿ-ಬನಹಟ್ಟಿ ನಗರಸಭೆ.