ರಬಕವಿ/ಬನಹಟ್ಟಿ: ಭಾರತವನ್ನು ಓದಬೇಕಾದರೆ ನೀವು ವಿವೇಕಾನಂದರನ್ನು ಓದಲೇಬೇಕು. ವಿವೇಕಾನಂದರೆಂದರೆ ಭಾರತವಿದ್ದಂತೆ. ಅವರೊಂದು ತಂತಿಯಲ್ಲಿ ಹರಿಯುವ ವಿದ್ಯುತ್ ಇದ್ದಂತೆ ಎಂದು ಬೆಂಗಳೂರಿನ ಯುವತಿ ಹಾರಿಕಾ ಮಂಜುನಾಥ ಬಣ್ಣಿಸಿದರು.
ಬನಹಟ್ಟಿ ಎಸ್‌ಟಿಸಿ ಕಲೆ, ವಾಣಿಜ್ಯ ಮತ್ತು ಪಿಜಿ ಸೆಂಟರ್ ಅಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಯುವ ದಿನ ಹಾಗೂ ಸುಭಾಷಚಂದ್ರ ಬೋಸ್ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಮ್ಮ ಮೇಲೆ ನಿಮಗೆ ವಿಶ್ವಾಸವಿದೆಯೋ ಅವರು ಆತ್ಮಸ್ಥೈರ್ಯ ಹೊಂದಲು ಸಾಧ್ಯ. ಆದ್ದರಿಂದ ಯುವ ಪೀಳಿಗೆ ಭಾರತಮಾತೆಯ ಪುತ್ರರಾಗಿ ಭಾರತ ವಿಶ್ವಗುರುವಾಗುವಂತೆ ಶ್ರಮಿಸಬೇಕು. ಭಾರತಮಾತೆ ಶ್ರೇಷ್ಠ ಪುತ್ರರಾಗಿ, ಅಪಾರ ಕೊಡುಗೆ ನೀಡಿದ ವಿವೇಕಾನಂದರನ್ನು ಯುವ ಪೀಳಿಗೆ ಒಮ್ಮೆ ಓದಬೇಕು ಎಂದು ಸಲಹೆ ನೀಡಿದರು.
ದೇಶದ ಸ್ವಾತಂತ್ರೃಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತ ಸುಭಾಷಚಂದ್ರ ಬೋಸ್ ಆದರ್ಶಗಳು ಎಂದಿಗೂ ಪ್ರಸ್ತುತ ಎಂದರು. ವಿದೇಶ ಸಾಫ್ಟವೇರ್ ಕಂಪನಿಯ ಸಿಇಒ ಬನಹಟ್ಟಿಯ ಅನೀಲ ಬಿದರಿ ಹಾಗೂ ವಿದ್ಯಾರ್ಥಿಗಳು ವಿವೇಕಾನಂದ ಹಾಗೂ ಜೈನ ಮುನಿ ಪಾರ್ಶ್ವನಾಥರ ಮೂರ್ತಿಗಳನ್ನು ಸಂಸ್ಥೆಗೆ ದಾನವಾಗಿ ನೀಡಿದರು.
ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯಿಕರ, ಇತಿಹಾಸ ತಜ್ಞ ಎಂ.ಎನ್. ಬೆನ್ನೂರ, ವೈ.ಬಿ. ಕೊರಡೂರ, ಎಸ್.ಪಿ. ನಿಡೋಣಿ, ಅನೀಲ ಬಿದರಿ ಮಾತನಾಡಿದರು. ಸಂಸ್ಥೆ ಚೇರ್ಮನ್ ಎಸ್.ಟಿ. ಭದ್ರನ್ನವರ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ. ಜಾಡಗೌಡ, ಎ.ಕೆ. ಕಾಡದೇವರ, ಎಸ್.ಐ. ಮಹಾಜನ, ಡಾ.ಪಿ.ವಿ. ಪಟ್ಟಣ, ಪಿ.ಆರ್. ಕನಗೊಂಡ ಸೇರಿ ಅನೇಕರು ಇದ್ದರು.
ಒ.ಆರ್. ಯರಗಟ್ಟಿಕರ ಸ್ವಾಗತಿಸಿದರು.