ರಬಕವಿ/ಬನಹಟ್ಟಿ: ಕೆರೊನಾ ವೈರಸ್‌ನ ಹಾವಳಿಯಿದ್ದರೂ ಜನರಲ್ಲಿ ಇಂದಿಗೂ ಜಾಗೃತಿ ಮೂಡುತ್ತಿಲ್ಲ. ಆದರೂ ಅವಶ್ಯಕ ವಸ್ತುಗಳಿಗೆ ಯಾವುದೇ ತೊಂದರೆ ಕೊಡದೆ ಅವುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜನರು ಮನೆಬಿಟ್ಟು ಹೊರಗೆ ಬರಬೇಡಿ ಎಂದು ಶಾಸಕ ಸಿದ್ದು ಸವದಿ ಮನವಿ ಮಾಡಿಕೊಂಡರು.
ನಗರಸಭೆ ಸಭಾ ಭವನದಲ್ಲಿ ಶನಿವಾರ ಜರುಗಿದ ಕರೊನಾ ಜಾಗೃತಿಗಾಗಿ ನಡೆದ ತಾಲೂಕು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಿತ್ಯ ಬಳಕೆಯ ಕಿರಾಣಿ, ಕಾಯಿಪಲ್ಲೆ, ಹಾಲು ಸೇರಿ ಇನ್ನಿತರ ವಸ್ತುಗಳಿಗೆ ಯಾವುದೇ ನಿರ್ಬಂಧವಿಲ್ಲ. ಪೊಲೀಸರು, ವೈದ್ಯರು ಸೇರಿ ಅನೇಕ ಸೇವಾದಾತರಿಗೆ ಮುಖಂಡರು ಅಲ್ಪೋಪಾಹಾರ, ಊಟ, ಮಜ್ಜಿಗೆ ಸೇರಿ ಇನ್ನಿತರ ಆಹಾರ ಪದಾರ್ಥ ನೀಡಿ ಸೇವೆ ಮಾಡುತ್ತಿರುವವರಿಗೆ ಧನ್ಯವಾದ ಎಂದು ಹೇಳಿದರು.
ಇನ್ನೂ ಕೆಲವರು ಮಾನವೀಯತೆ ಮರೆತು ಹಣ ಗಳಿಸಲು ಇದೇ ಸೂಕ್ತ ಸಮಯ ಎಂದು ದರಗಳನ್ನು ಹೆಚ್ಚಿಗೆ ಮಾಡಿ ಮಾರಾಟ ಮಾಡುವುದು ಸರಿಯಾದ ಕ್ರಮವಲ್ಲ. ವಾಟ್ಸಾಪ್ ಮೂಲಕ ಬರುವ ಸಂದೇಶಗಳನ್ನು ಸತ್ಯ ಎಂದು ತಿಳಿಯಬೇಡಿ. ಅಧಿಕಾರಿಗಳು ಪತ್ರ ಮೂಲಕ ತಿಳಿಸುವುದೇ ನಿಜವಾದ ಮಾಹಿತಿ ಎಂದರು.
ಎಸಿ ಸಿದ್ದು ಹುಲ್ಲೊಳ್ಳಿ ಮಾತನಾಡಿ, ದಿನಸಿ ವಸ್ತುಗಳ ಸರಬರಾಜು ಹಾಗೂ ಮಾರಾಟಗಾರರು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಬಾರದು. ನಿಯಮ ಉಲ್ಲಂಘಿಸಿದರೆ ಅಂಥವರ ಅಂಗಡಿಗಳನ್ನು ಸೀಜ್ ಮಾಡಿ ವಶಪಡಿಸಿಕೊಳ್ಳಲಾಗುವುದು. ದಿನಸಿ ವಸ್ತುಗಳನ್ನು ತರಲು ಸಾರಿಗೆಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಅನುಪತಿ ಪತ್ರ ನೀಡುತ್ತದೆ ಎಂದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ಡಿಎಸ್‌ಪಿ ಆರ್.ಕೆ. ಪಾಟೀಲ, ಸಿಪಿಐ ಕರುಣೇಶಗೌಡ ಜಿ. ಸೇರಿ ಅನೇಕರಿದ್ದರು.
ಬನಹಟ್ಟಿ ಶ್ರೀಶೈಲ ಸಜ್ಜನ ಎಂಬ ಕಿರಾಣಿ ವ್ಯಾಪಾರಸ್ಥರು ನಮಗೆ ಒಂದು ಕೆ.ಜಿ. ಊಟದ ಎಣ್ಣೆಗೆ 90 ರೂ. ಬದಲಾಗಿ 110 ರೂ. ಪಡೆದಿದ್ದಾರೆ. ಕೇಳಿದರೆ ಬೇಕೋ ಬೇಡವೋ ಎಂದು ಭಯ ಹುಟ್ಟಿಸುತ್ತಿದ್ದಾರೆ.
ಶಾಲಿನಿ ಮಾಲಾಪುರ, ಬನಹಟ್ಟಿ ನಗರದ ಗೃಹಿಣಿ