ಜಿಲ್ಲೆ

ರಸ್ತೆ ಡಾಂಬರೀಕರಣಕ್ಕೆ ಚಾಲನೆ

ರಬಕವಿ/ಬನಹಟ್ಟಿ: ನಗರಸಭೆ ವಿವಿಧ ಅನುದಾನದಡಿ 1 ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ಬನಹಟ್ಟಿ ನಗರದ ಒಟ್ಟು 3.5 ಕಿ.ಮೀ. ನಷ್ಟು ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಸಿದ್ದು ಸವದಿ ಶುಕ್ರವಾರ ಚಾಲನೆ ನೀಡಿದರು.

ಬನಹಟ್ಟಿ ನಗರದ ವಾರ್ಡ್ ನಂ.13 ರ ಅರುಣ ಚಿತ್ರಮಂದಿರದಿಂದ ಗೌಡರ ಕಟ್ಟಿಗೆ ಅಡ್ಡೆವರೆಗೆ, ವಾರ್ಡ್ ನಂ.7 ಮತ್ತು 8 ರ ಪತ್ತಾರ ಅಂಗಡಿಯಿಂದ ಭಗತ್ ಸಿಂಗ್ ವೃತ್ತದವರೆಗೆ ಹಾಗೂ ರಾಜು ಮಟ್ಟಿಕಲ್ಲಿ ಮನೆಯಿಂದ ಕುಚನೂರ ಮನೆವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಸವದಿ ಅಧಿಕೃತವಾಗಿ ಭೂಮಿಪೂಜೆ ನೆರವೇರಿಸಿದರು.

ಅವಳಿ ನಗರದಲ್ಲಿನ ರಸ್ತೆಗಳು ತೀರಾ ಹದಗೆಟ್ಟಿರುವುದು ಅರಿವಿಗಿದೆ. ಸದ್ಯ ಒಳಚರಂಡಿ ಹಾಗೂ ನೀರು ಸರಬರಾಜು ಸಂಬಂಧ ರಸ್ತೆ ಅಗೆಯುವ ಕಾರ್ಯ ಅನಿವಾರ್ಯವಾಗಿದ್ದು, ಜನತೆ ಸಹಕರಿಸಬೇಕೆಂದು ಸವದಿ ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಪಿ. ಶರಣಪ್ಪನವರ, ಧರೆಪ್ಪ ಉಳ್ಳಾಗಡ್ಡಿ, ಸಿದ್ದನಗೌಡ ಪಾಟೀಲ, ಹೀರಾಚಂದ ಕಾಸರ, ರಾಜು ಬಾಣಕಾರ, ಶ್ರೀಶೈಲ ಬೀಳಗಿ, ಪ್ರಭಾಕರ ಮೊಳೇದ, ಗೋವಿಂದ ಡಾಗಾ, ಶ್ರೀಶೈಲ ಯಾದವಾಡ, ಶಾಂತು ಬಳೆಗಾರ, ಶೇಖರ ಜವಳಗಿ, ಮಲ್ಲಪ್ಪ ಮೊಳೆಗಾಂವಿ, ಮನೋಹರ ಕೊಕಟನೂರ, ರೇವಪ್ಪ ಗುಣಕಿ ಸೇರಿ ಅನೇಕರಿದ್ದರು.